ADVERTISEMENT

ರಮೇಶ ಕುಮಾರ್‌ ಹೇಳಿಕೆ ಕಾಂಗ್ರೆಸ್‌ ಹಗಲು ದರೋಡೆಗೆ ಸಾಕ್ಷಿ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 11:16 IST
Last Updated 13 ಅಕ್ಟೋಬರ್ 2022, 11:16 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಹೂವಿನಹಡಗಲಿ/ಹೊಸಪೇಟೆ (ವಿಜಯನಗರ): ‘ಗಾಂಧಿ ಕುಟುಂಬದವರು ಮೂರು, ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ರಮೇಶ ಕುಮಾರ್ ಹೇಳಿರುವುದು ಕಾಂಗ್ರೆಸ್‌ ಹಗಲು ದರೋಡೆಗೆ ಸಾಕ್ಷಿ’ ಎಂದು ಮಾಜಿ ಮುಖ್ಯಮಂತ್ರಿಯೂ ಆದ ಶಾಸಕ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

ಇಲ್ಲಿನ ಜಿ.ಬಿ.ಆರ್‌. ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಮೇಶ ಕುಮಾರ್‌ ಅವರ ಹೇಳಿಕೆಯನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಅಲ್ಲಗಳೆದಿಲ್ಲ. ಇದು ಹಗಲು ದರೋಡೆಗೆ ಸಾಕ್ಷಿ. ಇಂಥ ಜನರನ್ನು ರಾಜ್ಯದಲ್ಲಿ ಲೂಟಿಗೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.

ರಾಹುಲ್ ಗಾಂಧಿ, ಸಿದ್ದರಾಮಯ್ಯನವರು ಬಿಜೆಪಿ ಹಗರಣಗಳ ಬಗ್ಗೆ ಮಾತಾಡುತ್ತಿದ್ದಾರೆ. ಯುಪಿಎ ಅವಧಿಯಲ್ಲಿ ಕಲ್ಲಿದ್ದಲ್ಲು, ಕಾಮನ್‌ವೆಲ್ತ್‌, 2ಜಿ ಹಗರಣ ನಡೆದಿತ್ತು. ರಾಬರ್ಟ್‌ ವಾದ್ರಾ ಅವರ ಹೆಸರು ಹಗರಣದಲ್ಲಿ ಕೇಳಿ ಬಂದಿದೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸೋನಿಯಾ, ರಾಹುಲ್‌ ಹೆಸರಿದೆ. ಈಗ ಅವರು ಹಗರಣಗಳ ಬಗ್ಗೆ ಮಾತಾಡುತ್ತಿರುವುದು ಎಷ್ಟರಮಟ್ಟಿಗೆ ಸೂಕ್ತವೆಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಪುನಃ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎನ್ನುವುದು ತಿರುಕನ ಕನಸು. ದೇಶದ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಉಳಿದ ಕಡೆ ಅಡ್ರೆಸ್‌ ಇಲ್ಲದಂತಾಗಿದೆ. ಕರ್ನಾಟಕದಲ್ಲಿ ಅಡ್ರೆಸ್‌ ಹುಡುಕಲು ‘ಭಾರತ್‌ ಜೋಡೋ’ ಯಾತ್ರೆ ನಡೆಸುತ್ತಿದ್ದಾರೆ. ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.