ಬೆಂಗಳೂರು: ‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಸರ್ಕಾರವು ಒಟ್ಟು 385 ಪ್ರಕರಣಗಳನ್ನು ವಾಪಸ್ ಪಡೆದಿತ್ತು. ಅವುಗಳಲ್ಲಿ 168 ಅಪರಾಧ ಮತ್ತು ಗಂಭೀರ ಅಪರಾಧ ಪ್ರಕರಣಗಳಾಗಿದ್ದವು. ಅದರಿಂದ ಸಿ.ಟಿ.ರವಿ, ಪ್ರಲ್ಹಾದ ಜೋಶಿ, ರಮೇಶ ಜಾರಕಿಹೊಳಿ ಸೇರಿ ಬಿಜೆಪಿಯ ಹಲವು ನಾಯಕರಿಗೆ ಅನುಕೂಲವಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ವಾಪಸ್ ಪಡೆದ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.
‘ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಕೋಮುದ್ವೇಷ, ದ್ವೇಷ ಭಾಷಣ, ಮತೀಯ ಗೂಂಡಾಗಿರಿ, ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಶ್ರೀರಾಮ ಸೇನೆ, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಎಸ್‌ಡಿಪಿಐ ಮತ್ತು ಪಿಎಫ್‌ಐ ವಿರುದ್ಧ ಇದ್ದ ಪ್ರಕರಣಗಳನ್ನೂ ಅವರು ವಾಪಸ್ ಪಡೆದಿದ್ದಾರೆ’ ಎಂದರು.
‘ನಾವು ಭಾಷೆ, ನೀರು ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯಲು ಕ್ರಮ ತೆಗೆದುಕೊಂಡಿದ್ದೇವೆ. ಗಂಭೀರ ಅಪರಾಧ ಪ್ರಕರಣಗಳನ್ನು ವಾಪಸ್ ಪಡೆದ ಬಿಜೆಪಿಗೆ ನಮ್ಮ ನಡೆಯನ್ನು ಪ್ರಶ್ನಿಸುವ ನೈತಿಕತೆ ಇಲ್ಲ’ ಎಂದರು.
‘ಕೆ.ಜೆ.ಹಳ್ಳಿ ಗಲಭೆ ಪ್ರಕರಣದ ತನಿಖೆ ಎನ್‌ಐಎ ನಡೆಸುತ್ತಿದೆ. ಆ ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದೇ ಇಲ್ಲ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಪ್ರಕರಣ ವಾಪಸಾತಿ ಪ್ರಕ್ರಿಯೆ ನ್ಯಾಯಾಲಯದ ಹಂತದಲ್ಲಿದೆ. ನ್ಯಾಯಾಲಯ ಒಪ್ಪಿದರಷ್ಟೇ ಅವು ರದ್ದಾಗುತ್ತವೆ. ಇಲ್ಲದಿದ್ದರೆ ಪ್ರಕರಣ ಮುಂದುವರೆಯುತ್ತವೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
‘ನಾನು ಪೊಲೀಸ್ ಇಲಾಖೆ ಬಲಪಡಿಸಿದ್ದೆ...’
ಪೊಲೀಸರ ಮೇಲಿನ ದಾಳಿ ಪ್ರಕರಣಗಳನ್ನು ವಾಪಸ್ ಪಡೆದರೆ ಪೊಲೀಸರ ನೈತಿಕತೆ ಕುಗ್ಗುವುದಿಲ್ಲವೇ ಎಂಬ ಪ್ರಶ್ನೆಗೆ ‘ನಾನು ಗೃಹ ಸಚಿವನಾಗಿದ್ದಾಗ ಪೊಲೀಸರಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದ್ದೆ. ಅವರ ನೈತಿಕತೆ ಉತ್ತುಂಗ ಸ್ಥಿತಿಯಲ್ಲಿತ್ತು’ ಎಂದು ರಾಮಲಿಂಗಾರೆಡ್ಡಿ ಉತ್ತರಿಸಿದರು. ಇದಕ್ಕೆ ಮರುಪ್ರಶ್ನೆ ಎಸೆದ ಸುದ್ದಿಗಾರರು ‘ಹಾಗಿದ್ದಲ್ಲಿ ಈಗಿನ ಗೃಹಸಚಿವರ ಆಡಳಿತದಲ್ಲಿ ಪೊಲೀಸರ ನೈತಿಕತೆ ಕುಸಿದಿದೆ ಎಂದರ್ಥವೇ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ನನ್ನ ಅವಧಿ ಮುಗಿದ ಮೇಲೆ ಬಿಜೆಪಿ ನಾಲ್ಕು ವರ್ಷ ಆಡಳಿತ ನಡೆಸಿತ್ತು. ಆ ಅವಧಿಯಲ್ಲಿ ಪೊಲೀಸರ ನೈತಿಕತೆ ಕುಸಿದಿತ್ತು ಎಂದರ್ಥ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.