ADVERTISEMENT

ಪಿ.ಜಿ ಪ್ರವೇಶ ಪರೀಕ್ಷಾ ಶುಲ್ಕಕ್ಕೂ ಜಿಎಸ್‌ಟಿ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೊರೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 20:23 IST
Last Updated 10 ಮಾರ್ಚ್ 2021, 20:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರೀಕ್ಷಾ(ನೀಟ್) ಶುಲ್ಕವನ್ನು ಹೆಚ್ಚಳ ಮಾಡಿದ್ದು, ಇದಕ್ಕೆ ಜಿಎಸ್‌ಟಿ (ಸರಕು ಸೇವಾ ತೆರಿಗೆ) ವಿಧಿಸಿರುವುದು ಭಾರಿ ವಿರೋಧಕ್ಕೆ ಕಾರಣವಾಗಿದೆ.

ಅಲ್ಲದೆ, ಪರೀಕ್ಷಾ ವಿಧಾನದಲ್ಲೂ ಕೊನೆಗಳಿಗೆಯಲ್ಲಿ ಬದಲಾವಣೆ ಮಾಡಲಾಗಿದೆ. ಕಳೆದ ವರ್ಷದ ವರೆಗೆ 300 ಪ್ರಶ್ನೆಗಳಿಗೆ ಉತ್ತರ ಬರೆಯಬೇಕಾಗಿತ್ತು. ಈ ವರ್ಷ 200 ಪ್ರಶ್ನೆಗಳಿಗೆ ಉತ್ತರ ಬರೆಯಬೇಕಾಗಿದೆ. ಕೊನೆ ಗಳಿಗೆಯ ಬದಲಾವಣೆ ವಿದ್ಯಾರ್ಥಿಗಳು ಮತ್ತು ಬೋಧಕರಲ್ಲಿ ಗೊಂದಲ ಉಂಟು ಮಾಡಿದೆ.

ಈ ಪರೀಕ್ಷೆಗೆ ಹಾಜರಾಗುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ₹5,015, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ₹3,835 ನಿಗದಿ ಮಾಡಲಾಗಿದೆ. ಕಳೆದ ವರ್ಷ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ₹3,750, ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದವರಿಗೆ ₹2,750 ಇತ್ತು.

ADVERTISEMENT

ಪರಿಷ್ಕೃತ ಶುಲ್ಕವು ಶೇ 18 ರಷ್ಟು ಜಿಎಸ್‌ಟಿಯನ್ನು ಒಳಗೊಂಡಿದೆ. ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯೊಂದಕ್ಕೆ ಜಿಎಸ್‌ಟಿ ವಿಧಿಸುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಯುಪಿಎಸ್‌ಸಿ, ಗೇಟ್‌ ಮತ್ತು ಸಿಎಟಿಗೆ ಕ್ರಮವಾಗಿ ₹200, ₹1,500 ಮತ್ತು ₹2,000 ಶುಲ್ಕ ಪಡೆಯಲಾಗುತ್ತದೆ. ವೈದ್ಯಕೀಯ ಸ್ನಾತಕೋತ್ತರ ನೀಟ್‌ಗೆ ₹5,015 ವಿಧಿಸುತ್ತಿರುವುದು ಸರಿಯಲ್ಲ. ಇತರ ಪ್ರವೇಶ ಪರೀಕ್ಷೆಗಳಿಗೆ ಹೋಲಿಸಿದರೆ ಇದು ಅತ್ಯಧಿಕ. ಅಲ್ಲದೆ, ಅದಕ್ಕೆ ಜಿಎಸ್‌ಟಿ ವಿಧಿಸುತ್ತಿರುವುದು ತರ್ಕಹೀನ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿಮ್ಹಾನ್ಸ್‌, ಜೆಐಪಿಎಂಇಆರ್‌ ಇತರ ಸಂಸ್ಥೆಗಳಿಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಪ್ರವೇಶ ಪರೀಕ್ಷೆ ನಡೆಸುತ್ತದೆ. ಇಲ್ಲಿ ಸಾಮಾನ್ಯ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಶುಲ್ಕ ₹1,500, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ₹1,200 ನಿಗದಿ ಮಾಡಲಾಗಿದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ನೀಟ್‌ ಪರೀಕ್ಷೆ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಒಂದು ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಅರ್ಜಿಯನ್ನು ಸಲ್ಲಿಸಲು ಮಾರ್ಚ್‌ 15 ಕೊನೆಯ ದಿನವಾಗಿದ್ದು, ಏಪ್ರಿಲ್‌ 18 ರಂದು ಪರೀಕ್ಷೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.