ADVERTISEMENT

ಉಕ್ಕು, ರಸಗೊಬ್ಬರ ಉದ್ಯಮಕ್ಕೆ ವಿನಾಯ್ತಿ

ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 20:05 IST
Last Updated 6 ಏಪ್ರಿಲ್ 2020, 20:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ರಾಜ್ಯದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿರುವ ನಡುವೆಯೇ ರಾಜ್ಯ ಸರ್ಕಾರ ಕೆಲ ಉದ್ಯಮಗಳಿಗೆ ಇದರಿಂದ ವಿನಾಯ್ತಿ ನೀಡಿದೆ.

ಉತ್ಪಾದನಾ ವಲಯದಲ್ಲಿನ ಕೆಲವು ಕ್ಷೇತ್ರಗಳಲ್ಲಿ ನಿರಂತರತೆ ಕಾಯ್ದುಕೊಳ್ಳುವ ಉದ್ದೇಶದಿಂದ ವಿನಾಯ್ತಿ ನೀಡಲಾಗಿದೆ. ಆದರೆ, ವಿನಾಯ್ತಿ ಪಡೆದ ಕೈಗಾರಿಕೆಗಳು ಕಡ್ಡಾಯವಾಗಿ ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಪಾಲಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ತಿಳಿಸಿದ್ದಾರೆ.

ಇತ್ತೀಚೆಗೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೆಲ ಕ್ಷೇತ್ರಗಳ ಉದ್ಯಮಗಳಿಗೆ ಲಾಕ್‌ಡೌನ್‌ನಿಂದ ವಿನಾಯ್ತಿ ನೀಡುವ ತೀರ್ಮಾನ ಕೈಗೊಳ್ಳಲಾಯಿತು. ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಹಾಗೂ ಉತ್ಪಾದನೆಯಲ್ಲಿ ನಿರಂತರತೆ ಕಾಯ್ದುಕೊಳ್ಳಬೇಕಾದ ಉದ್ಯಮಗಳು ಎಂದಿನಂತೆ ಕೆಲಸ ಮಾಡಲಿವೆ.

ADVERTISEMENT

ಕೇಂದ್ರ ಗೃಹ ಸಚಿವಾಲಯವು ಮಾರ್ಚ್‌ 27ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ಕೈಗಾರಿಕೆಗಳಿಗೆ ವಿನಾಯ್ತಿ ನೀಡುವಂತೆ ಹೇಳಿತ್ತು. ಇದಕ್ಕೆ ಪೂರಕವಾಗಿ ಮಾರ್ಚ್‌ 31ರಂದು ಸೇರಿದ್ದ ಉನ್ನತ ಮಟ್ಟದ ಸಭೆಯಲ್ಲಿ ವಿನಾಯ್ತಿ ನೀಡುವ ತೀರ್ಮಾನ ಕೈಗೊಳ್ಳಲಾಯಿತು.

ಉಕ್ಕು, ಸಿಮೆಂಟ್‌, ಕಾಗದ, ಪೆಟ್ರೋಲಿಯಂ, ರಸಗೊಬ್ಬರ, ಗಾಜು, ಕಲ್ಲಿದ್ದಲು ಮುಂತಾದ ಕ್ಷೇತ್ರದ ಉದ್ಯಮಗಳಿಗೆ ಇದರಿಂದ ವಿನಾಯ್ತಿ ದೊರೆತಿದೆ. ಆದರೆ, ಕೊವಿಡ್‌– 19 ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ವಿನಾಯ್ತಿಯು ಕಾರ್ಖಾನೆಗಳ ಕಾರ್ಯಾಚರಣೆಗೆ ಮಾತ್ರ ಅನ್ವಯ. ಇವುಗಳ ಪ್ರಧಾನ ಕಚೇರಿ ಮತ್ತು ಆಡಳಿತ ವಿಭಾಗಕ್ಕೆ ಅನ್ವಯಿಸುವುದಿಲ್ಲ.

ಉಕ್ಕಿನ ಕಾರ್ಖಾನೆಗಳನ್ನು ಒಮ್ಮೆ ಸ್ಥಗಿತಗೊಳಿಸಿದರೆ ಮತ್ತೆ ಪುನರಾರಂಭಿಸಲು 60ರಿಂದ 90 ದಿನ ಬೇಕು. ಇದರಿಂದ ಉದ್ಯಮಕ್ಕೆ ಭಾರಿ ನಷ್ಟ, ಯಂತ್ರೋಪಕರಣಗಳಿಗೆ ಹಾನಿಯೂ ಆಗಲಿದೆ ಎಂದು ಉಕ್ಕು ಕಾರ್ಖಾನೆ ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಜೆಎಸ್‌ಡಬ್ಲ್ಯು ಕಿರ್ಲೋಸ್ಕರ್‌ಫೆರಸ್‌, ಕಲ್ಯಾಣಿ, ವಿಎಸ್‌ಐಎಲ್‌, ಎಂಎಸ್‌ಪಿಎಲ್‌ ಮತ್ತು ಕೆಐಒಸಿಎಲ್‌ ಸೇರಿದಂತೆ ಅನೇಕ ಉಕ್ಕು ಕಾರ್ಖಾನೆಗಳಿವೆ. ಇದಲ್ಲದೆ, ಸುಮಾರು 50ಕ್ಕೂ ಹೆಚ್ಚು ಸ್ಪಾಂಜ್‌ ಉಕ್ಕು ಕಾರ್ಖಾನೆಗಳಿದ್ದು, ಸಾರಿಗೆ ಸಮಸ್ಯೆಯಿಂದಾಗಿ ಬಂದ್‌ ಆಗಿವೆ. ಲಾಕ್‌ಡೌನ್‌ ಪರಿಣಾಮವಾಗಿ ಮಾನಿಟರಿಂಗ್‌ ಸಮಿತಿ ಅದಿರು ಇ– ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.