ADVERTISEMENT

ಮತ್ತೆ ಸಾವಿರ ಮದ್ಯದಂಗಡಿ?

ಹಳ್ಳಿ, ಪಟ್ಟಣ, ನಗರಗಳಲ್ಲಿ ಹೊಸ ಪರವಾನಗಿ* ಸರ್ಕಾರದ ತಯಾರಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2023, 0:30 IST
Last Updated 25 ಸೆಪ್ಟೆಂಬರ್ 2023, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಸಣ್ಣ ಗ್ರಾಮ ಪಂಚಾಯಿತಿಗಳು, ನಗರಗಳಲ್ಲಿನ ಸೂಪರ್‌ ಮಾರುಕಟ್ಟೆಗಳಲ್ಲಿ ಹೊಸ ಪರವಾನಗಿ ವಿತರಣೆ, ಬಳಕೆಯಲ್ಲಿ ಇಲ್ಲದ ಪರವಾನಗಿಗಳಿಗೆ ಮರುಜೀವ ನೀಡುವುದು ಸೇರಿದಂತೆ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಮದ್ಯದಂಗಡಿಗಳ ಆರಂಭಕ್ಕೆ ಅಬಕಾರಿ ಇಲಾಖೆ ಮುಂದಾಗಿದೆ.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನಿಗದಿಪಡಿಸಿರುವ ಗುರಿಯನ್ನು ಮೀರಿ ವರಮಾನ ಸಂಗ್ರಹಕ್ಕೆ ಯೋಜನೆ ರೂಪಿಸಿರುವ ಅಬಕಾರಿ ಇಲಾಖೆ, ಮದ್ಯದಂಗಡಿಗಳೇ ಇಲ್ಲದ 600ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕನಿಷ್ಠ ತಲಾ ಒಂದು ಮದ್ಯದಂಗಡಿಗೆ ಪರವಾನಗಿ ನೀಡಲು ಪ್ರಸ್ತಾವ ಸಿದ್ಧಪಡಿಸಿದೆ.

ADVERTISEMENT

ಹೊಸ ಪ್ರಸ್ತಾವಗಳ ಕುರಿತು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರು ಇಲಾಖೆಯ ಅಧಿಕಾರಿಗಳ ಜತೆ ಪ್ರಾಥಮಿಕ ಹಂತದ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೆಪ್ಟೆಂಬರ್‌ 14ರಂದು ನಡೆದ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಹಾದು ಹೋಗಿರುವ ಪ್ರದೇಶಗಳು ಹಾಗೂ 5,000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾರಾ ಹೋಟಲ್‌, ಹೋಟೆಲ್‌ ಮತ್ತು ಬೋರ್ಡಿಂಗ್‌ಗೆ ಮದ್ಯದಂಗಡಿ ಪರವಾನಗಿ ನೀಡುವುದಕ್ಕೆ ನಿರ್ಬಂಧವಿದೆ. ಅದನ್ನು ತೆಗೆದುಹಾಕಿ ಈ ಎಲ್ಲ ಪ್ರದೇಶಗಳಲ್ಲೂ ಮದ್ಯದಂಗಡಿ ಪರವಾನಗಿ ನೀಡುವ ಪ್ರಸ್ತಾವ ಅಬಕಾರಿ ಇಲಾಖೆಯ ಮುಂದಿದೆ.

ಸೂಪರ್‌ ಮಾರ್ಕೆಟ್‌ನಲ್ಲೂ ಮದ್ಯ: ಬಿಬಿಎಂಪಿ ವ್ಯಾಪ್ತಿ ಹಾಗೂ ಜಿಲ್ಲಾ ಕೇಂದ್ರಗಳ ವ್ಯಾಪ್ತಿಗಳಲ್ಲಿ ಸೂಪರ್‌ ಮಾರ್ಕೆಟ್‌ ಹಾಗೂ ಹೈಪರ್‌ ಮಾರುಕಟ್ಟೆಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಇದಕ್ಕಾಗಿ 11 ವರ್ಷಗಳ ಅವಧಿಗೆ ಸಿಎಲ್‌–2ಎ ಎಂಬ ಹೊಸ ವಿಧದ ಮದ್ಯದಂಗಡಿ ಪರವಾನಗಿ ನೀಡುವ ಯೋಜನೆ ರೂಪಿಸಲಾಗುತ್ತಿದೆ.

‘ರಾಜ್ಯದಲ್ಲಿರುವ ಸೂಪರ್‌ ಮಾರುಕಟ್ಟೆಗಳು ಮತ್ತು ಹೈಪರ್‌ ಮಾರುಕಟ್ಟೆಗಳ ಪೈಕಿ ಶೇಕಡ 25ರಷ್ಟು ಕಡೆ ಮದ್ಯದಂಗಡಿಗಳು ಈಗಾಗಲೇ ಇವೆ. ಚಾಲ್ತಿಯಲ್ಲಿರುವ ಪರವಾನಗಿಗಳನ್ನು ದುಬಾರಿ ಬೆಲೆಗೆ ಖರೀದಿಸಿ ಅಲ್ಲಿ ಮದ್ಯದಂಗಡಿ ತೆರಯಲಾಗಿದೆ. ದುಬಾರಿ ಬೆಲೆಗೆ ಮದ್ಯದಂಗಡಿ ಪರವಾನಗಿ ಮಾರಾಟ ಮಾಡುವುದನ್ನು ನಿಯಂತ್ರಿಸುವುದಕ್ಕಾಗಿ ನೇರವಾಗಿ ಸೂಪರ್‌ ಮಾರುಕಟ್ಟೆ ಮತ್ತು ಹೈಪರ್‌ ಮಾರುಕಟ್ಟೆಗಳಿಗೆ ಪರವಾನಗಿ ನೀಡುವ ಪ್ರಸ್ತಾವ ಸಿದ್ಧಪಡಿಸಲಾಗಿದೆ’ ಎನ್ನುತ್ತಾರೆ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು.

379 ಪರವಾನಗಿ ಹರಾಜು:

ರಾಜ್ಯದ ವಿವಿಧೆಡೆ 247 ಮದ್ಯದಂಗಡಿ ತೆರೆಯಲು ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಸಂಸ್ಥೆಗೆ ಮಂಜೂರಾತಿ ನೀಡಲಾಗಿತ್ತು. ಅವು ಇನ್ನೂ ಆರಂಭವಾಗಿಲ್ಲ. 1987ರಲ್ಲಿ ನಿಗದಿಪಡಿಸಿದ್ದ ಕೋಟಾದ ಅಡಿಯಲ್ಲಿ ಇನ್ನೂ 137 ಮದ್ಯದಂಗಡಿ ಪರವಾನಗಿ ವಿತರಣೆಗೆ ಅವಕಾಶವಿದೆ. ಒಟ್ಟು 379 ಮದ್ಯದಂಗಡಿ ಪರವಾನಗಿಗಳನ್ನು ಎರಡು ವರ್ಷಗಳ ಅವಧಿಗೆ ಖಾಸಗಿಯವರಿಗೆ ಹರಾಜಿನ ಮೂಲಕ ನೀಡುವ ಪ್ರಸ್ತಾವವನ್ನು ಅಬಕಾರಿ ಇಲಾಖೆ ಸಿದ್ಧಪಡಿಸಿದೆ.

ದೀರ್ಘಕಾಲದಿಂದ ನವೀಕರಣವಾಗದೇ ಉಳಿದಿರುವ 200ಕ್ಕೂ ಹೆಚ್ಚು ಮದ್ಯದಂಗಡಿಗಳ ಪರವಾನಗಿಗಳಿಗೆ ಮರುಜೀವ ನೀಡುವುದಕ್ಕೂ ಇಲಾಖೆ ಮುಂದಾಗಿದೆ. ಅಂತಹ ಎಲ್ಲ ಪರವಾನಗಿಗಳನ್ನು ರದ್ದುಗೊಳಿಸಿ, ಅಷ್ಟೇ ಸಂಖ್ಯೆಯ ಹೊಸ ಪರವಾನಗಿ ವಿತರಿಸುವ ಪ್ರಸ್ತಾವವೂ ಇಲಾಖೆಯಲ್ಲಿ ಚರ್ಚೆಯ ಹಂತದಲ್ಲಿದೆ ಎಂದು ಮೂಲಗಳು ಹೇಳಿವೆ.

ಎಚ್‌.ಡಿ. ಕುಮಾರಸ್ವಾಮಿ
ಎಸ್‌. ಸುರೇಶ್‌ಕುಮಾರ್

ಹೊಸ ಪ್ರಸ್ತಾವಗಳು

379 ಮದ್ಯದಂಗಡಿ ಪರವಾನಗಿ ಹರಾಜು

200 ನವೀಕರಣಗೊಳ್ಳದ ಪರವಾನಗಿಗಳಿಗೆ ಮರುಜೀವ

600 ಸಣ್ಣ ಗ್ರಾಮ ಪಂಚಾಯಿತಿಗಳಲ್ಲಿ ಮದ್ಯದಂಗಡಿ ಪರವಾನಗಿ

ಮದ್ಯದಂಗಡಿಗಳ ಸಂಖ್ಯೆ (ಮಾದರಿ–ಸಂಖ್ಯೆ)

ಸಿಎಲ್‌ ‌–2;3986 ಸಿಎಲ್‌–4;279 ಸಿಎಲ್‌–7;2382 ಸಿಎಲ್‌–9;3634 ಸಿಎಲ್–11;1041 ಆರ್‌ವಿಬಿ;745 ವೈನ್‌ ಟಾವರ್ನ್‌;198 ವೈನ್‌ ಬುಟಿಕ್‌;94 ಮೈಕ್ರೋ ಬ್ರೀವರಿ;69

ಒಟ್ಟು;12614

ಇನ್ನಷ್ಟು ಹೊಸ ಪ್ರಸ್ತಾವಗಳು * ಮೈಕ್ರೋ ಬ್ರೀವರಿ ಪರವಾನಗಿ ಶುಲ್ಕ ₹2.30 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಳ * ಮಹಾನಗರ ಪಾಲಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪಡೆದ ರೆಸ್ಟೋರೆಂಟ್‌ಗಳಲ್ಲಿ ಬಿಯರ್‌ ಚಿಲ್ಲರೆ ಮಾರಾಟ ಘಟಕಕ್ಕೆ ಅನುಮತಿ ನೀಡುವುದು * ತಡವಾಗಿ ಪರವಾನಗಿ ನವೀಕರಣ ಮಾಡುವವರಿಗೆ ಶೇ 25ರಷ್ಟು ದಂಡ ವಿಧಿಸುವುದು

ಜನಹಿತವೇ ನಮ್ಮ ಗುರಿ

‘ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಇದರಿಂದ ಖರೀದಿದಾರರಿಗೆ ಹೊರೆಯಾಗುತ್ತಿದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲೂ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಯೋಚಿಸಿದ್ದೇವೆ’ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೆದ್ದಾರಿಗಳು ಜನಸಂಖ್ಯೆ ಮತ್ತಿತರ ಕಾರಣಗಳಿಂದ ಕೆಲವು ಪ್ರದೇಶಗಳಲ್ಲಿ ಮದ್ಯದಂಗಡಿಗಳಿಗೆ ಪರವಾನಗಿ ನೀಡಿಲ್ಲ. ಆದರೆ ಅಂತಹ ಎಲ್ಲ ಕಡೆಗಳಲ್ಲೂ ಅನಧಿಕೃತವಾಗಿ ಮದ್ಯ ಮಾರಾಟವಾಗುತ್ತಿದೆ. ಜನ ಸಾಮಾನ್ಯರು ನಿಗದಿತ ದರಕ್ಕಿಂತಲೂ ಹೆಚ್ಚು ಹಣ ನೀಡಿ ಮದ್ಯ ಖರೀದಿಸುವುದನ್ನು ತಪ್ಪಿಸಲು ಮದ್ಯದಂಗಡಿಗಳ ಸಂಖ್ಯೆ ಹೆಚ್ಚಿಸುವುದು ಅನಿವಾರ್ಯ’ ಎಂದರು. ಮಂಜೂರಾತಿ ನೀಡಿದ್ದರೂ ಆರಂಭವಾಗದ ನೂರಾರು ಅಂಗಡಿಗಳಿವೆ. ನವೀಕರಣಗೊಳ್ಳದ ಪರವಾನಗಿಗಳೂ ಇವೆ. ಅವೆಲ್ಲವನ್ನೂ ಮದ್ಯ ಮಾರಾಟದಲ್ಲಿನ ಅಸಮತೋಲನ ನೀಗಿಸಲು ಬಳಸಿಕೊಳ್ಳಲಾಗುವುದು. ಈ ಎಲ್ಲವೂ ಈಗ ಚರ್ಚೆಯ ಹಂತದಲ್ಲಷ್ಟೇ ಇವೆ ಎಂದು ತಿಳಿಸಿದರು. ‘ಮದ್ಯ ಮಾರಾಟ ಬಂಡವಾಳಶಾಹಿಗಳ ಹಿಡಿತದಲ್ಲಿದೆ. ಸಾಮಾನ್ಯ ಜನರು ಈ ಉದ್ಯಮ ಪ್ರವೇಶಿಸಲು ಅಸಾಧ್ಯವಾದ ಸ್ಥಿತಿ ಇದೆ. ಅದನ್ನು ಬದಲಿಸಿ ಎಲ್ಲ ವರ್ಗದ ಜನರೂ ಮದ್ಯದಂಗಡಿ ತೆರೆಯುವ ಅವಕಾಶ ಒದಗಿಸಬೇಕು ಎಂಬುದು ನಮ್ಮ ಯೋಚನೆ’ ಎಂದರು.

ಕಾಂಗ್ರೆಸ್‌ನ 6ನೇ ಗ್ಯಾರಂಟಿ ‘ಮದ್ಯಭಾಗ್ಯ’: ಎಚ್‌ಡಿಕೆ ಟೀಕೆ

ಹಳ್ಳಿಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ರಾಜ್ಯ ಸರ್ಕಾರ ಕರ್ನಾಟಕವನ್ನು ಕುಡುಕರ ತೋಟವಾಗಿ ಪರಿವರ್ತಿಸಲು ಹೊರಟಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಅಬಕಾರಿ ಆದಾಯ ಹೆಚ್ಚಿಸಲು ಮೂರು ಸಾವಿರ ಜನಸಂಖ್ಯೆ ಇರುವ ಹಳ್ಳಿಗಳು ಹಾಗೂ ಸೂಪರ್‌ ಮಾರ್ಕೆಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಾರಿಯರಿಗೆ ಶಕ್ತಿ ತುಂಬುತ್ತೇವೆ ಎನ್ನುವ ಸರ್ಕಾರ ಗ್ರಾಮಗಳಲ್ಲೂ ಮದ್ಯ ಮಾರಾಟಕ್ಕೆ ಉತ್ತೇಜನ ನೀಡುವ ಮೂಲಕ ಮಹಿಳೆಯರ ಬಾಳಿಗೆ ಬೆಂಕಿ ಹಾಕುತ್ತಿದೆ. ಗೃಹಲಕ್ಷ್ಮಿಗೂ ಗ್ರಹಣವಾಗಿದೆ. ಅನ್ನಭಾಗ್ಯಕ್ಕೆ ಅಕ್ಕಿ ಹೊಂದಿಸುವ ಬದಲು ಮದ್ಯಭಾಗ್ಯಕ್ಕೆ ಉತ್ತೇಜನ ನೀಡುತ್ತಿದೆ. ಇದು ಕಾಂಗ್ರೆಸ್‌ನ 6ನೇ ಗ್ಯಾರಂಟಿ’ ಎಂದಿದ್ದಾರೆ. ‘ಅಕ್ಕಿ ಬೇಳೆ ದವಸಧಾನ್ಯ ಹಣ್ಣು ತರಕಾರಿ ಹಾಲು-ಮೊಸರು ಸಿಗುವ ಸೂಪರ್ ಮಾರುಕಟ್ಟೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದು ಅಸಹ್ಯದ ಪರಮಾವಧಿ. ಇದು ಸಮಾಜವಾದವೇ’ ಎಂದು ಪ್ರಶ್ನಿಸಿದ್ದಾರೆ.

‘ಯುವಕರನ್ನು ಮದ್ಯದ ದಾಸರಾಗಿಸುವ ಕ್ರಮ’

‘ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲ ಎನ್ನುತ್ತಿರುವ ರಾಜ್ಯ ಸರ್ಕಾರ ತನ್ನ ರಾಜಕೀಯ ಲಾಭದ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಿಸಲು ಮದ್ಯ ಮಾರಾಟದ ದಾರಿ ಹಿಡಿದಿರುವುದು ಖಂಡನೀಯ’ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್‌ ಟೀಕಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಇದೊಂದು ಮನೆಮುರುಕ ಪ್ರಸ್ತಾವ. ಮನೆಯ ಯಜಮಾನಿಗೆ ತಿಂಗಳಿಗೆ ₹2000 ಕೊಟ್ಟು ಯಜಮಾನನಿಂದ ₹6000 ಸೂರೆ ಮಾಡುವ ಹುನ್ನಾರವಿದು. ಹೆದ್ದಾರಿಗಳ ಇಕ್ಕೆಲಗಳಲ್ಲಿ ಮದ್ಯದಂಗಡಿ ತೆರೆಯವುದರಿಂದ ಮತ್ತಷ್ಟು ಅಪಘಾತ ಸಾವು ನೋವು ಉಂಟಾಗಬಹುದು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಲ್‌ ಸೂಪರ್‌ ಮಾರುಕಟ್ಟೆಗಳಲ್ಲಿ ಮದ್ಯದಂಗಡಿ ತೆರೆದರೆ ಯುವಕರು ಸುಲಭವಾಗಿ ಮದ್ಯದ ದಾಸರಾಗಲು ಅವಕಾಶ ನೀಡಿದಂತಾಗುತ್ತದೆ. ಸಣ್ಣ ಗ್ರಾಮ ಪಂಚಾಯಿತಿಗಳಲ್ಲಿ ಮದ್ಯದಂಗಡಿ ಪರವಾನಗಿ ನೀಡುವುದು ಕೂಡ ಬಲಗೈಯಲ್ಲಿ ಖರ್ಚು ಮಾಡಿ ಎಡಗೈಯಲ್ಲಿ ವಸೂಲಿ ಮಾಡುವ ನಿರ್ದಯಿ ಚಿಂತನೆ ಎಂದು ದೂರಿದ್ದಾರೆ. ‘ಸರ್ಕಾರ ತನ್ನ ನಿಲುವು ಬದಲಿಸದಿದ್ದರೆ ‘ಶಕ್ತಿ’ ಯೋಜನೆಯಡಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿನೀಡುತ್ತಿರುವ ಮಹಿಳೆಯರು ಸರ್ಕಾರದ ವಿರುದ್ಧ ‘ಸ್ತ್ರೀ ಶಕ್ತಿ’ ಪ್ರದರ್ಶನಕ್ಕೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.