ಬೆಂಗಳೂರು: ‘ದೇವಾಲಯದಲ್ಲಿ ಸಿದ್ಧಪಡಿಸುವ ಪ್ರಸಾದಕ್ಕೆ ಎಷ್ಟು ಅಕ್ಕಿ, ಸಕ್ಕರೆ, ಉಪ್ಪು-ಖಾರ ಬಳಸಲಾಗುತ್ತದೆ? ನಿತ್ಯ ಎಷ್ಟು ಪೂಜೆ, ಅರ್ಚನೆ ನಡೆಸಲಾಗುತ್ತದೆ? ಅದರಿಂದ ಸಂಗ್ರವಾಗುವ ಹಣವೆಷ್ಟು? ಈ ಹಣವನ್ನೆಲ್ಲಾ ಯಾವುದಕ್ಕೆ ಖರ್ಚು ಮಾಡುತ್ತೀರಿ...? ಎಂಬೆಲ್ಲಾ ಪ್ರಶ್ನೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುವ ಮೂಲಕ ಕೆಲವರು ನಮಗೆ ಕಿರುಕುಳ ನೀಡಿ ಪ್ರಾಣ ಬೆದರಿಕೆ ಒಡ್ಡುತ್ತಿದ್ದು, ಕಾನೂನು ರಕ್ಷಣೆ ನೀಡಬೇಕು’ ಎಂದು ಕೋರಿ ಅರ್ಚಕರ ಸಂಘ ಹೈಕೋರ್ಟ್ ಮೆಟ್ಟಿಲೇರಿದೆ.
ಈ ಕುರಿತಂತೆ ‘ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಪೂಜಾರಿಗಳು, ಆಗಮಿಕರು ಮತ್ತು ಅರ್ಚಕರ ಸಂಘ’ದ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಾದವನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ಆಲಿಸಿದ್ದು, ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಿದೆ.
‘ಕೆಲವರು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ಇಲಾಖೆಯ ಆಯುಕ್ತರ ಕಚೇರಿಯ ಅಧಿಕಾರಿಗಳ ಮೂಲಕ ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಗಳ ಹೆಸರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ, ಅನಗತ್ಯ ಪ್ರಶ್ನೆ ಕೇಳುತ್ತಾರೆ. ಮಾಹಿತಿ ಕೊಡದಿದ್ದರೆ ಹಲವು ರೀತಿಯ ಕಿರುಕುಳ ನೀಡಿ, ಪ್ರಾಣ ಬೆದರಿಕೆ ಹಾಕುತ್ತಾರೆ. ಇದರಿಂದ ಅರ್ಚಕರಿಗೆ ದೈನಂದಿನ ಧಾರ್ಮಿಕ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಅರ್ಜಿದಾರರು ವಿವರಿಸಿದ್ದಾರೆ.
‘ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಿಸಿ ರಾಜ್ಯ ಸರ್ಕಾರ 2007ರ ಜೂನ್ 16 ಮತ್ತು 2017ರ ಫೆಬ್ರುವರಿ 3ರಂದು ಹೊರಡಿಸಿರುವ ಅಧಿಸೂಚನೆಗಳನ್ನು ರದ್ದುಪಡಿಸಬೇಕು. ದೇವಸ್ಥಾನಗಳು ಸಾರ್ವಜನಿಕ ಸಂಸ್ಥೆಗಳಲ್ಲ ಎಂದು ಘೋಷಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.