ADVERTISEMENT

ಕಾವೇರಿ: ಮಾಲಿನ್ಯದ ಪರಿಣಾಮ ತಡೆಗೆ ತಜ್ಞರ ಸಮಿತಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 22:05 IST
Last Updated 5 ಜುಲೈ 2024, 22:05 IST
   

ಬೆಂಗಳೂರು: ಸಂಸ್ಕರಿಸದೇ ಇರುವ ಕೈಗಾರಿಕಾ ತ್ಯಾಜ್ಯ, ಒಳಚರಂಡಿ ನೀರು ಮತ್ತು ಘನತ್ಯಾಜ್ಯ ಸೇರಿ ಕಾವೇರಿ ನದಿಗೆ ಆಗುತ್ತಿರುವ ಹಾನಿಯನ್ನು ತಡೆಗಟ್ಟುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ರಾಜ್ಯ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಿದೆ.

ಈ ಸಂಬಂಧ ಅರಣ್ಯ ಇಲಾಖೆಯು ಆದೇಶ ಹೊರಡಿಸಿದೆ. ಆದೇಶ ತಲುಪಿದ 10 ದಿನಗಳ ಒಳಗೆ ಅಧ್ಯಯನ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಪರಿಸರ ಅಧಿಕಾರಿ ನಿರಂಜನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.

ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌, ಮೈಸೂರು ಮಹಾನಗರ ಪಾಲಿಕೆಯ ಮುಖ್ಯ ಎಂಜಿನಿಯರ್‌, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ (ಮೈಸೂರು) ಮುಖ್ಯ ಎಂಜಿನಿಯರ್‌ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಮೈಸೂರು) ಕಾರ್ಯನಿರ್ವಾಹಕ ಎಂಜಿನಿಯರ್‌, ಮೈಸೂರು ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥರು, ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಬಿ.ಮನೋಜ್‌ ಕುಮಾರ್‌, ನಿವೃತ್ತ ಹಿರಿಯ ಪರಿಸರ ಅಧಿಕಾರಿ ಎಂ.ಬಿ.ಪ್ರಕಾಶ್‌ ಅವರು ಸದಸ್ಯರಾಗಿರುತ್ತಾರೆ.

ADVERTISEMENT

ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ಪ್ರಾದೇಶಿಕ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಸದಸ್ಯ ಸಂಯೋಜಕ ರಾಗಿರುತ್ತಾರೆ.

ದಿನೇಶ್‌ ಗೂಳಿಗೌಡ ಪತ್ರ: ಶ್ರೀರಂಗಪಟ್ಟಣದ ಚಂದಗಾಲು ಬಳಿ ಸಂಸ್ಕರಿಸದೇ ಇರುವ ಕೈಗಾರಿಕಾ ತ್ಯಾಜ್ಯ ಮತ್ತು ಮೈಸೂರಿನ ಒಳಚರಂಡಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ನದಿ ಕಲುಷಿತವಾಗುತ್ತಿದೆ. ಪರಿಸರ, ಜೀವವೈವಿಧ್ಯಕ್ಕೆ ಹಾನಿಯಾಗುತ್ತಿದೆ. ಇದನ್ನು ತಡೆಯಲು ಸಮಿತಿ ರಚಿಸುವಂತೆ ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಬೃಹತ್ ಕೈಗಾರಿಕಾ ಸಚಿವ ಹಾಗೂ ಅರಣ್ಯ ಸಚಿವರಿಗೆ ಇದೇ ಮೇನಲ್ಲಿ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.