ADVERTISEMENT

ಕೆಆರ್‌ಎಸ್‌ ಸುರಕ್ಷತೆ ಪರಿಶೀಲನೆಗೆ ತಜ್ಞರ ತಂಡ

ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ದಿನೇಶ ಗೂಳಿಗೌಡ ಮನವಿಗೆ ಡಿಸಿಎಂ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 14:28 IST
Last Updated 15 ಡಿಸೆಂಬರ್ 2023, 14:28 IST
   

ಬೆಳಗಾವಿ: ಕೆಆರ್‌ಎಸ್‌ ಜಲಾಶಯದಲ್ಲಿ ಹೂಳು ತುಂಬಿದೆಯೇ, ಆಧುನಿಕ ತಂತ್ರಜ್ಞಾನಕ್ಕೆ ಅಣೆಕಟ್ಟು ಹೊಂದಿಕೆ ಆಗುವಂತಿದೆಯೇ ಎಂದು ಪರಿಶೀಲಿಸಲು ಅಲ್ಲಿಗೆ ತುರ್ತಾಗಿ ತಜ್ಞರ ತಂಡ ಕಳುಹಿಸಿ ಅಧ್ಯಯನ ನಡೆಸಿ, ಸೂಕ್ತ‌ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.

ಅಣೆಕಟ್ಟಿನ ಗರಿಷ್ಠ ಸಾಮರ್ಥ್ಯದ 49.50 ಟಿಎಂಸಿ ಅಡಿ ನೀರು ಈಗಲೂ ಸಂಗ್ರಹ ಆಗುತ್ತಿದೆಯೇ‌? ಸೀಪೇಜ್ ನಿರ್ವಹಣೆ, ಗೇಟ್ ಸುಸ್ಥಿತಿ ಸೇರಿ ಇತರ ಅಂಶಗಳನ್ನು ಪರಿಶೀಲಿಸಬೇಕು ಎಂದು ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಅವರು ಸಚಿವರಿಗೆ ಮನವಿ ಮಾಡಿದ್ದರು. ಈ ಮನವಿ ಸ್ಪಂದಿಸಿದ ಸಚಿವರು ಈ ಸೂಚನೆ ನೀಡಿದ್ದಾರೆ.

ಮನವಿಯಲ್ಲಿ ಏನಿದೆ?: ಮಂಡ್ಯ ಜಿಲ್ಲೆಯ ವ್ಯವಸಾಯ, ಕುಡಿಯುವ ನೀರು, ಮೈಸೂರು, ಬೆಂಗಳೂರು ಮಹಾ ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಜಿಲ್ಲೆಗಳ ಕುಡಿಯುವ ನೀರಿಗೆ ಕೆಆರ್‌ಎಸ್‌ ಅಣೆಕಟ್ಟೆಯನ್ನು ಅವಲಂಬಿಸಲಾಗಿದೆ. ಇದರಿಂದ ಅಣೆಕಟ್ಟೆಯ ಸುರಕ್ಷತೆ, ಕಾರ್ಯನಿರ್ವಹಣೆ ಸಾಮರ್ಥ್ಯದ ಬಗ್ಗೆ ಪರಿಶೀಲಿಸಿ, ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ’ ಎಂದು ಮನವಿಯಲ್ಲಿ ಆಗ್ರಹಿಸಿದ್ದರು. 

ADVERTISEMENT

ಅಣೆಕಟ್ಟೆ ನಿರ್ಮಿಸುವ ಕಾಲದಲ್ಲಿ ‘ಹೈ ಡ್ಯಾಂ ತಂತ್ರಜ್ಞಾನ’ ಇರಲಿಲ್ಲ. ಪ್ರಸ್ತುತ ಆಧುನಿಕ ತಂತ್ರಜ್ಞಾನದೊಂದಿಗೆ ಅಣೆಕಟ್ಟೆಯನ್ನು ಸುಭದ್ರಗೊಳಿಸಲು ಕ್ರಮ ವಹಿಸಬೇಕು. ಅಣೆಕಟ್ಟೆಯಲ್ಲಿ ಡ್ರೈನೇಜ್ ಗ್ಯಾಲರಿ ಇಲ್ಲದಿರುವುದರಿಂದ ಸೀಪೇಜ್ ನಿರ್ವಹಣೆ ಸರಿಯಾಗಿ ಆಗುತ್ತಿದೆಯೇ ಎಂದು ಪರೀಕ್ಷಿಸಿ, ಸಮಸ್ಯೆ ಇದ್ದರೆ ತಕ್ಷಣ ಸರಿಪಡಿಸಬೇಕಿದೆ. ಅಣೆಕಟ್ಟೆಯಲ್ಲಿ ನೀರು ತುಂಬಿದಾಗ ಹೊರಬಿಡಲು ಬಳಸುವ ಗೇಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಲು ತಜ್ಞರ ತಂಡವನ್ನು ಅಲ್ಲಿಗೆ ಕಳುಹಿಸಬೇಕು. ಅಲ್ಲದೆ, ಅಣೆಕಟ್ಟೆಯ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದೆಯೇ ಎಂದು ಸರ್ವೇ ಮಾಡಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದೂ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.