ಬೆಂಗಳೂರು: ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿನ ಜಲಕ್ಷಾಮ ಅಧ್ಯಯನಕ್ಕೆ ತಜ್ಞರ ತಂಡವನ್ನು ರಚಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
’ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ನೆವಳಸೆ ಅರಣ್ಯ ವಿಭಾಗದಲ್ಲಿ ಹಳ್ಳಗಳು ಬರಿದಾಗಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ. ಆದರೆ, ಫೆಬ್ರುವರಿವರೆಗೆ ತುಂಬಿ ಹರಿಯಬೇಕಾದ ಹಳ್ಳಕೊಳ್ಳಗಳು ನವೆಂಬರ್ ಮುಗಿಯುವುದರ ಒಳಗಾಗಿ ಬತ್ತಿದೆ. ರಾಜ್ಯದ ನೀರಿನ ಸುಸ್ಥಿರತೆ ದೃಷ್ಟಿಯಿಂದ ಇದು ಅಘಾತಕಾರಿ ವಿಚಾರ‘ ಎಂದಿದ್ದಾರೆ.
’ಸಮೃದ್ಧ ಮಳೆಯ ಕಾಲದಲ್ಲೂ ಹಳ್ಳಗಳು ಬರಿದಾಗಿರುವುದು ಮುಂದಿನ ದಿನಗಳ ಜಲಕ್ಷಾಮದ ಸೂಚನೆ. ಈ ಕುರಿತು ಅಧ್ಯಯನ ನಡೆಸಲು ಅರಣ್ಯ, ಪರಿಸರ ಇಲಾಖೆ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಸಹಯೋಗದಲ್ಲಿ ತಜ್ಞರ ತಂಡ ರಚಿಸಬೇಕು. ತಂಡ ಪರಿಶೀಲನೆ ನಡೆಸಿ, ಪರಿಹಾರದ ಮಾರ್ಗೋಪಾಯಗಳನ್ನು ಒಳಗೊಂಡ ವರದಿ ನೀಡಲು ಮೂರು ತಿಂಗಳ ಗಡುವು ನಿಗದಿ ಮಾಡಬೇಕು‘ ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.