ಶಿವಮೊಗ್ಗ: ಸೊರಬ ತಾಲ್ಲೂಕಿನ ಗುಡವಿ ಪಕ್ಷಿಧಾಮದ ಸುತ್ತಲ ಹೊಲ, ತೋಟ, ಗದ್ದೆಗಳಲ್ಲಿ ಬೆಳೆಗಳಿಗೆ ರಾಸಾಯನಿಕ ಬಳಸುವ ಪರಿಣಾಮ ಅಪರೂಪದ ಪಕ್ಷಿ ಸಂಕುಲಗಳು ವಿನಾಶದತ್ತ ಸಾಗಿವೆ.
186 ಎಕರೆ ವಿಸ್ತಾರದಲ್ಲಿ ವ್ಯಾಪಿಸಿರುವ ಪಕ್ಷಿಧಾಮದಲ್ಲಿ ಪ್ರತಿ ವರ್ಷ ಮಳೆಗಾಲ–ಚಳಿಗಾಲದ ಸಮಯದಲ್ಲಿ 15 ಸಾವಿರಕ್ಕೂ ಹೆಚ್ಚು ಪಕ್ಷಿಗಳು ನೆಲೆ ನಿಲ್ಲುತ್ತಿದ್ದವು. ಪಕ್ಷಿ ತಜ್ಞರು, ವನ್ಯಜೀವಿ ಪರಿಣತರು, ವೃಕ್ಷಲಕ್ಷ ಆಂದೋಲನದ ಕಾರ್ಯಕರ್ತರು ನಡೆಸಿದ ಸಮೀಕ್ಷೆಯ ಪ್ರಕಾರದೊಡ್ಡ ಬೆಳ್ಳಕ್ಕಿ, ಹಾವಕ್ಕಿ, ಬಿಳಿ ಕೆಂಬರಳು, ಕಪ್ಪು ತಲೆ ಬಾತು,ಜಕಣ, ಉದ್ದ ಕೊಕ್ಕಿನ ನೀರುಕಾಗೆ, ಚಮಚದ ಕೊಕ್ಕಿನ ಪಕ್ಷಿ, ಬಿಳಿ ಕತ್ತಿನ ಕೊಕ್ಕರೆ, ನದಿ ರೀವಾ, ಗ್ರೇ ಹೆರಾನ್, ನೈಟ್ ಹೆರಾನ್, ಬಾಯಿ ಕಳಕ ಹಕ್ಕಿ, ಪುಟ್ಟ ನೀರು ಕಾಗೆ ಮೊದಲಾದ 43 ಕುಟುಂಬಗಳ 217 ಜಾತಿಯ ಪಕ್ಷಿಗಳು ಅಲ್ಲಿ ಕಾಣಲು ಸಿಗುತ್ತಿದ್ದವು.
1986ರಲ್ಲಿ ಅಭಿವೃದ್ಧಿ ಹೊಂದಿದ ಪಕ್ಷಿಧಾಮಕ್ಕೆ ವಿವಿಧ ದೇಶಗಳ ಪಕ್ಷಿಗಳು ವಲಸೆ ಬಂದು ಇಲ್ಲಿನ ವಾತಾವರಣದಲ್ಲಿ ನೆಲೆನಿಂತು ಸಂತಾನೋತ್ಪತ್ತಿಯಲ್ಲಿ ತೊಡಗುತ್ತಿದ್ದವು. ಗುಡವಿ ಸುತ್ತಲಿನ ಅರಣ್ಯದಲ್ಲಿ ಸಿಗುವ ಹಣ್ಣು, ಹಂಪಲುಗಳು, ಹಳ್ಳಿಗಳ ಜೌಗು ಪ್ರದೇಶಗಳಲ್ಲಿ ಬೆಳೆಯುವ ಭತ್ತವೇ ಪಕ್ಷಿಗಳಿಗೆ ಪ್ರಮುಖ ಆಹಾರ. ಜೌಗು ಪ್ರದೇಶ ಕಡಿಮೆಯಾಗಿರುವುದು, ಅಡಿಕೆ, ಶುಂಠಿಯಂತಹ ವಾಣಿಜ್ಯ ಬೆಳೆ ಪ್ರದೇಶಗಳ ವಿಸ್ತರಣೆ, ಬೆಳೆಗಳಿಗೆ ಅತಿಯಾದ ರಾಸಾಯನಿಕ ಬಳಕೆ ಪರಿಣಾಮ ಪಕ್ಷಿ ಸಂಕುಲದ ವಿನಾಶವಾಗುತ್ತಿದೆ ಎಂದು ಪಕ್ಷಿ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
‘ಪಕ್ಷಿಗಳ ಆವಾಸಸ್ಥಾನ ನೈಸರ್ಗಿಕ ಕೆರೆಯ ಸುತ್ತಲಿನ ಕೃಷಿ ಭೂಮಿಗಳಲ್ಲಿ ಅತಿಯಾದ ರಾಸಾಯನಿಕ ಬಳಕೆ, ಕೀಟನಾಶಕ ಔಷಧಗಳ ಸಿಂಪಡಣೆ ಪಕ್ಷಿಗಳಿಗೆ ಮಾರಕವಾಗಿದೆ. ಒಂದು ದಶಕದ ಅವಧಿಯಲ್ಲಿ ಪಕ್ಷಿಗಳ ಸಂಖ್ಯೆ ಅರ್ಧಕ್ಕಿಂತ ಕ್ಷಿಣಿಸಿದೆ. ವನ್ಯಜೀವಿ ವಿಭಾಗದ ಅಧಿಕಾರಿಗಳು ಪಕ್ಷಿಧಾಮ ಪುನಶ್ಚೇತನ ತುರ್ತುಯೋಜನೆ ಜಾರಿ ಮಾಡಬೇಕು.ಜನರ ಸಹಭಾಗಿತ್ವದ ನಿರ್ವಹಣಾ ಸಮಿತಿ ರಚಿಸಬೇಕು. ರಾಜ್ಯದ ಅತಿ ದೊಡ್ಡ ಪಕ್ಷಿಧಾಮ ಸಂರಕ್ಷಿಸಬೇಕು’ ಎಂದು ಆಗ್ರಹಿಸುತ್ತಾರೆ ಜೀವ ವೈವಿಧ್ಯ ಅಧ್ಯಯನಕಾರ ಮಂಜುನಾಥ ಹೊಸಬಾಳೆ, ವನ್ಯಜೀವಿ ತಜ್ಞರಾದ ಬಾಲಚಂದ್ರ ಸಾಯಿಮನೆ, ರತ್ನಾಕರ ಬಾಡಲಕೊಪ್ಪ, ಸುಹಾಸ್ ಹುಲೇಮಳಗಿ, ಅತ್ತಿವೇರಿ ಪಕ್ಷಿಧಾಮದ ಮಹೇಶ, ಶ್ರೀಪಾದ ಬಿಚ್ಚುಗತ್ತಿ, ವೃಕ್ಷಲಕ್ಷ ಆಂದೋಲನ ಸಂಚಾಲಕ ಕೆ.ವೆಂಕಟೇಶ.
ಮಿತಿ ಮೀರಿದ ಮಂಗಗಳ ಹಾವಳಿ: ಗುಡವಿ ಪಕ್ಷಿಧಾಮ ಉತ್ತರ ಕನ್ನಡ, ಶಿವಮೊಗ್ಗ ಗಡಿ ಪ್ರದೇಶದಲ್ಲಿದೆ. ಕೆಲವು ವರ್ಷಗಳಿಂದ ಈಚೆಗೆ ಮಂಗಗಳ ಸಂತತಿ ಗಣನೀಯವಾಗಿ ಹೆಚ್ಚಳವಾಗಿದೆ. ಸಂರಕ್ಷಣೆ ಇಲ್ಲದ ಪರಿಣಾಮ ಪಕ್ಷಿಗಳ ಗೂಡು ಮೊಟ್ಟೆ-ಮರಿಗಳನ್ನು ನಾಶ ಮಾಡುತ್ತಿವೆ. ಪಕ್ಷಿಧಾಮದ ಸುತ್ತಲಿನ ಬೇಲಿಗಳೂ ಹಾಳಾಗಿವೆ. ಭೂಮಿಯೂ ಅತಿಕ್ರಮಣಕ್ಕೆ ಒಳಗಾಗಿದೆ. ಪಕ್ಷಿಗಳ ಹಾರಾಟಕ್ಕೆ, ಸ್ವಾತಂತ್ರ್ಯಕ್ಕೆ ಭಂಗವಾಗಿದೆ ಎನ್ನುತ್ತಾರೆ ಪಕ್ಷಿಪ್ರಿಯರು.
*
ಗುಡವಿ ಪಕ್ಷಿಗಳ ಉಳಿವಿಗೆ ತಜ್ಞರ ತಂಡ ನೀಡಿರುವ ವರದಿ ಸರ್ಕಾರದ ಗಮನಕ್ಕೆ ತರಲಾಗುವುದು. ಪಕ್ಷಿಗಳ ಸಂತತಿ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಲು ಕೋರಲಾಗುವುದು.
–ಅನಂತ ಹೆಗಡೆ ಅಶೀಸರ, ಅಧ್ಯಕ್ಷ, ರಾಜ್ಯ ಜೀವ ವೈವಿಧ್ಯ ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.