ADVERTISEMENT

ಸ್ಪಾಗಳಲ್ಲಿ ಸುಲಿಗೆ ಪ್ರಕರಣ: ಕೇರಳದಲ್ಲಿ ನಿರೂಪಕಿ ದಿವ್ಯಾ ವಸಂತ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 21:52 IST
Last Updated 11 ಜುಲೈ 2024, 21:52 IST
ದಿವ್ಯಾ ವಸಂತ 
ದಿವ್ಯಾ ವಸಂತ    

ಬೆಂಗಳೂರು: ಇಂದಿರಾನಗರ ಸೇರಿದಂತೆ ಹಲವು ಕಡೆಯ ಸ್ಪಾಗಳಲ್ಲಿ ಸುಲಿಗೆ ನಡೆಸಿದ್ದ ಆರೋಪದಡಿ ಸುದ್ದಿ ವಾಹಿನಿ ನಿರೂಪಕಿ ದಿವ್ಯಾ ವಸಂತ ಅವರನ್ನು ಜೆ.ಬಿ.ನಗರ ಠಾಣೆ ಪೊಲೀಸರು ಕೇರಳದಲ್ಲಿ ಗುರುವಾರ ಬಂಧಿಸಿದ್ದಾರೆ.

‘ಆರೋಪಿಯನ್ನು ನಗರಕ್ಕೆ ಕರೆ ತರಲಾಗುತ್ತಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ಇಂದಿರಾನಗರ ಸ್ಪಾ ವ್ಯವಸ್ಥಾಪಕರನ್ನು ಬೆದರಿಸಿ ₹15 ಲಕ್ಷ ಸುಲಿಗೆ ಯತ್ನ ಪ್ರಕರಣದಲ್ಲಿ ದಿವ್ಯಾ ಅವರು ತಲೆಮರೆಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ‘ರಾಜ್’ ನ್ಯೂಸ್ ಸುದ್ದಿ ವಾಹಿನಿ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ರಾಜಾನುಕುಂಟೆ ವೆಂಕಟೇಶ್ ಮತ್ತು ದಿವ್ಯಾ ವಸಂತ ಅವರ ಸಹೋದರ ಸಂದೇಶ್‌ ಅವರನ್ನೂ ಪೊಲೀಸರು ಬಂಧಿಸಿದ್ದರು. 

ADVERTISEMENT

ಪ್ರಕರಣ ದಾಖಲಾದ ಮೇಲೆ ದಿವ್ಯಾ ಅವರು ಸ್ನೇಹಿತರ ನೆರವು ಕೋರಿ ಕೇರಳಕ್ಕೆ ಪರಾರಿ ಆಗಿದ್ದರು. ಸಚಿನ್ ಮತ್ತು ಆಕಾಶ ಎಂಬುವವರ ಪತ್ತೆಗೆ ಶೋಧ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ವೆಂಕಟೇಶ್ ಹಾಗೂ ದಿವ್ಯಾ ಅವರು ಸುಲಿಗೆ ಕೃತ್ಯಗಳಿಗೆ ವಾಟ್ಸ್‌ಆ್ಯಪ್‌ನಲ್ಲಿ ‘ಸ್ಕೈ ರಿಸರ್ಚ್ ಟೀಂ’ ಹೆಸರಿನ ಗ್ರೂಪ್ ರಚಿಸಿಕೊಂಡಿದ್ದರು. ಈ ಗ್ರೂಪ್‌ನಲ್ಲಿ ತಮ್ಮ ಕಾರ್ಯಸೂಚಿಗಳ ಬಗ್ಗೆ ಆರೋಪಿಗಳು ಚರ್ಚಿಸುತ್ತಿದ್ದರು. ಆರೋಪಿಗಳು ಒಂದು ತಂಡ ಕಟ್ಟಿಕೊಂಡು ಇತ್ತೀಚಿಗೆ ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯರಸ್ತೆಯ ‘ಟ್ರೀ ಸ್ಪಾ ಆ್ಯಂಡ್ ಬ್ಯೂಟಿ’ ಪಾರ್ಲರ್‌ನ ವ್ಯವಸ್ಥಾಪಕ ಶಿವಶಂಕರ್‌ಗೆ ವೇಶ್ಯಾವಾಟಕೆ ನಡೆದಿದೆ ಎಂದು ಬೆದರಿಸಿ ಹಣ ಸುಲಿಗೆಗೆ ಯತ್ನಿಸಿದ್ದರು. ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ವೆಂಕಟೇಶ್ ಹಾಗೂ ದಿವ್ಯಾ ತಂಡ ಕೆಲ ದಿನಗಳ ಹಿಂದೆ ಬ್ಯೂಟಿ ಪಾರ್ಲರ್‌ಗೆ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿತ್ತು. ಬಳಿಕ ಗ್ರಾಹಕನ ಸೋಗಿನಲ್ಲಿ ಸ್ಪಾಗೆ ದಿವ್ಯಾ ಸೋದರ ಸಂದೇಶ್ ತೆರಳಿದ್ದರು. ಈ ಮೊದಲೇ ಸ್ಪಾನಲ್ಲಿ ಕೆಲಸದಲ್ಲಿದ್ದ ತನ್ನ ತಂಡದ ಯುವತಿ ಬಳಿಯೇ ಮಸಾಜ್‌ಗೆ ದಿನಾಂಕ ನಿಗದಿಪಡಿಸಿದ್ದರು. ಆಗ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಗ್ರಾಹಕರು ಸಲುಗೆಯಿಂದಿರುವ ದೃಶ್ಯಾವಳಿಗಳನ್ನು ಸಂದೇಶ್ ಚಿತ್ರೀಕರಿಸಿಕೊಂಡಿದ್ದರು. ಬಳಿಕ ತನ್ನ ವಾಹಿನಿಯ ವರದಿಗಾರ್ತಿಯನ್ನು ಸ್ಪಾಗೆ ಕಳುಹಿಸಿ ವೆಂಕಟೇಶ್ ಹಣ ಸುಲಿಗೆಗೆ ಯತ್ನಿಸಿದ್ದರು’ ಎಂದು ಪೊಲೀಸರು ಹೇಳಿದರು.

ಈ ಹಿಂದೆ ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದ ದಿವ್ಯಾ ಅವರು ಕಾರ್ಯಕ್ರಮವೊಂದರಲ್ಲಿ ‘ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ’ ಎಂದು ಹೇಳಿ ಸದ್ದು ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.