ADVERTISEMENT

ತಜ್ಞ ಹುದ್ದೆಗಳಿಲ್ಲದಿದ್ದರೂ ಹೆಚ್ಚುವರಿ ಭತ್ಯೆ

ಪಿಜಿ, ಪಿಎಚ್‌.ಡಿ ಆದವರಿಗೆ ಆದ್ಯತೆ: ಹೊಸ ಪ್ರವೃತ್ತಿ ಹುಟ್ಟುಹಾಕಿದ ಪಶುಸಂಗೋಪನಾ ಇಲಾಖೆ

ವಿಜಯಕುಮಾರ್ ಎಸ್.ಕೆ.
Published 14 ಜೂನ್ 2020, 20:11 IST
Last Updated 14 ಜೂನ್ 2020, 20:11 IST
ಪಶು ಸಂಗೋಪನಾ ಇಲಾಖೆ
ಪಶು ಸಂಗೋಪನಾ ಇಲಾಖೆ   

ಬೆಂಗಳೂರು: ‍ಪಶುಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ತಜ್ಞ ಹುದ್ದೆಗಳೇ ಇಲ್ಲದಿದ್ದರೂಸ್ನಾತಕೋತ್ತರ ಪದವಿ, ಪಿಎಚ್‌.ಡಿ ಪಡೆದಿರುವ 987 ಪಶುವೈದ್ಯರಿಗೆ ವಿಶೇಷ ಭತ್ಯೆ ನೀಡಲು ಸರ್ಕಾರ ತೀರ್ಮಾನಿಸಿದೆ.

‌ಇಲಾಖೆಯಲ್ಲಿ ಮಂಜೂರಾಗಿರುವ 3,317 ಪಶುವೈದ್ಯ ಹುದ್ದೆಗಳ ಪೈಕಿ 2,284 ಹುದ್ದೆಗಳು ಭರ್ತಿಯಾಗಿವೆ. ಬಿವಿಎಸ್‌ಸಿ (ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್) ಪದವಿ ಪಡೆದವರನ್ನು ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸ್ನಾತಕೋತ್ತರ ಪದವಿ ಪಡೆದವರನ್ನು ತಜ್ಞ ವೈದ್ಯರ ಹುದ್ದೆಗಳಿಗೆ ನಿಯೋಜಿಸಿ ಅದಕ್ಕೆ ತಕ್ಕಂತ ವೇತನ ಶ್ರೇಣಿ ನಿಗದಿ ಮಾಡುತ್ತಿದೆ.

ಆದರೆ, ಪಶುಸಂಗೋಪನಾ ಇಲಾಖೆಯಲ್ಲಿತಜ್ಞ ವೈದ್ಯರ ಹುದ್ದೆಗಳೇ ಇಲ್ಲ. ಬಿವಿಎಸ್‌ಸಿ ವಿದ್ಯಾರ್ಹತೆಯೊಂದಿಗೆ ನೇಮಕವಾದವರು ಸ್ನಾತಕೋತ್ತರ ಪದವಿ ಅಥವಾ ಪಿಎಚ್‌.ಡಿ ಪಡೆದಿದ್ದರೂ ಪಶುವೈದ್ಯರ ಹುದ್ದೆಯನ್ನಷ್ಟೇ ನಿರ್ವಹಿಸುತ್ತಾರೆ. ಆರೋಗ್ಯ ಇಲಾಖೆ, ಆಯುಷ್ ಇಲಾಖೆಯಲ್ಲಿ 2019ರಲ್ಲಿ ಎಲ್ಲಾ ವೈದ್ಯರಿಗೆ ವಿಶೇಷ ಭತ್ಯೆ ನೀಡಲಾಯಿತು. ಅದರಂತೆ ಎಲ್ಲಾ ಪಶುವೈದ್ಯರಿಗೂ ಮಾಸಿಕ ತಲಾ ₹5,250 ರಿಂದ ₹5,750ರವರೆಗೆ ವಿಶೇಷ ಭತ್ಯೆ ನೀಡಲಾ ಯಿತು. ಈ ಸೌಲಭ್ಯ ಇಲಾಖೆಯ ಎಲ್ಲಾ ವೈದ್ಯರಿಗೆ ದೊರೆತಿದೆ.

ADVERTISEMENT

ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಪಡೆದಿರುವ ಪಶು ವೈದ್ಯರುಅದೇ ಹುದ್ದೆಗಳಲ್ಲೇ ಮುಂದು ವರಿಯಲು ಹೆಚ್ಚುವರಿ ಭತ್ಯೆಗಳನ್ನು ನೀಡ ಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಹಲವು ದಿನಗಳಂದ ಇಟ್ಟಿದ್ದರು. ಇಲಾಖೆಯ ಹಿರಿಯ ಅಧಿಕಾರಿಗಳು ಈ ಬೇಡಿಕೆಯನ್ನು ಹಲವು ಬಾರಿ ತಿರಸ್ಕರಿಸಿದ್ದರು. ಬಿವಿಎಸ್‌ಸಿ ವಿದ್ಯಾರ್ಹತೆ ಇದ್ದವರನ್ನು ವೈದ್ಯರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಅವರು ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಾರೆ ಎಂಬ ಕಾರಣಕ್ಕೆ ಹೆಚ್ಚುವರಿ ಭತ್ಯೆಗಳನ್ನು ನೀಡಲು ಆಗುವುದಿಲ್ಲ. ಇದೇ ಪ್ರವೃತ್ತಿ ಮುಂದುವರಿದರೆ ಡಿ ಗ್ರೂಪ್ ನೌಕರರಿಗೂ ಅವರ ವಿದ್ಯಾರ್ಹತೆಗೆ ತಕ್ಕಂತೆ ವೇತನ ಮತ್ತು ಭತ್ಯೆಗಳನ್ನು ನೀಡಬೇಕಾಗುತ್ತದೆ. ಈ ಪ್ರಸ್ತಾಪವೇ ಕಾನೂನು ಬಾಹಿರ ಎಂದು ಹೇಳಿದ್ದರು.

ಹಿರಿಯ ಅಧಿಕಾರಿಗಳು ಬದಲಾದ ನಂತರ ಹೆಚ್ಚುವರಿ ಭತ್ಯೆ ಪಡೆಯುವ ಪ್ರಸ್ತಾವ ಮತ್ತೆ ಮುನ್ನೆಲೆಗೆ ಬಂದು ಇದೇ 11ರಂದು ಸರ್ಕಾರಿ ಆದೇಶವೂ ಆಗಿದೆ.

‘ಸ್ನಾತಕೋತ್ತರ, ಪಿಎಚ್‌.ಡಿ ಪದವಿ ಪಡೆದವರನ್ನು ತಜ್ಞ ಹುದ್ದೆಗಳಿಗೆ ನಿಯೋಜಿಸಿ ಅದಕ್ಕೆ ತಕ್ಕಂತೆ ವೇತನ ನೀಡಲಿ. ಆದರೇ, ಅದೇ ಹುದ್ದೆಗಳಲ್ಲಿ ಮುಂದುವರಿಸಿ ಹೆಚ್ಚುವರಿ ಕೆಲಸ ಇಲ್ಲದೆ, ಹೆಚ್ಚುವರಿ ಭತ್ಯೆ ನೀಡುವುದು ಎಷ್ಟು ಸರಿ. ಪಶುವೈದ್ಯರ ನಡುವೆ ತಾರತಮ್ಯ ಹುಟ್ಟುಹಾಕಲಾಗುತ್ತಿದೆ’ ಎಂಬುದು ಬಿವಿಎಸ್‌ಸಿ ವಿದ್ಯಾರ್ಹತೆಯ ಪಶುವೈದ್ಯರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.