ಹುಬ್ಬಳ್ಳಿ: ನಗರದ ಮೂರು ಸಾವಿರ ಮಠದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಗುರುಸಿದ್ಧೇಶ್ವರರ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಜಾತ್ರೆ ಅಂಗವಾಗಿ ಮಠದಲ್ಲಿ ಬೆಳಗಿನ ಜಾವ ಲಕ್ಷ ಬಿಲ್ವಾರ್ಚನೆ, ರುದ್ರಾಭಿಷೇಕ, ಎಲೆ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಠವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಥವನ್ನು ತಳಿರು ತೋರಣ, ವಿವಿಧ ಹೂವುಗಳಿಂದ ಸಿಂಗರಿಸಲಾಗಿತ್ತು.
ಸಂಜೆ 4 ಗಂಟೆಗೆ ಮೂರು ಸಾವಿರ ಮಠದಿಂದ ಸಕಲ ವಾದ್ಯ ಮೇಳದೊಂದಿಗೆ ಆರಂಭವಾದ ಪಲ್ಲಕ್ಕಿ ಮೆರವಣಿಗೆ, ಬಮ್ಮಾಪುರ ಓಣಿಯ ಗುರುಸಿದ್ದೇಶ್ವರ ಕಲ್ಯಾಣ ಮಂಟಪ (ಓಲಿ ಮಠ)ಕ್ಕೆ ತೆರಳಿತು. ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿಯು ಮರಳಿ ಮಠಕ್ಕೆ ಆಗಮಿಸಿತು. ಶ್ರೀಮಠದ ಆವರಣದಲ್ಲಿ ಸಂಜೆ 6.10 ರಥೋತ್ಸವ ಆರಂಭಗೊಂಡಿತು.
ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ರಥಕ್ಕೆ ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ‘ಗುರುಸಿದ್ಧೇಶ್ವರ ಮಹಾರಾಜಕಿ ಜೈ’, ‘ಹರ ಹರ ಮಹಾದೇವ’, ‘ಓಂ ನಮಃ ಶಿವಾಯ’ ಘೋಷಣೆಗಳು ಮೊಳಗಿದವು.
ರಥವು ಸೊರಬದಮಠ ಗಲ್ಲಿವರೆಗೆ ತೆರಳಿ, ಅಲ್ಲಿಂದ ಮತ್ತೆ ಮೂರು ಸಾವಿರ ಮಠಕ್ಕೆ ಮರಳಿತು. ಭಕ್ತರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ರಥೋತ್ಸವ ಕಣ್ತುಂಬಿಕೊಂಡರು. ಜಾಂಜ್, ಹಲಗೆ ವಾದನ, ಡೊಳ್ಳು ಕುಣಿತ ತಂಡಗಳು ರಥೋತ್ಸವಕ್ಕೆ ಕಳೆ ತಂದವು.
ಶೂನ್ಯ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರ ವಾರ್ಷಿಕ ರಜತ ಸಿಂಹಾಸನಾರೋಹಣ ನಡೆಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಹಲವು ಗಣ್ಯರು, ಮುಖಂಡರು ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಪ್ರಮುಖರಾದ ವಿಜಯಕುಮಾರ ಶೆಟ್ಟರ್, ಅರುಣ ಕುಬಸದ, ಎಂ.ಕಳಸರಾಯ, ಸದಾನಂದ ಡಂಗನವರ, ವೀರಣ್ಣ ಕಲ್ಲೂರ, ಚನ್ನಬಸಪ್ಪ ಧಾರವಾಡಶೆಟ್ಟರ್, ಅಮರೇಶ ಹಿಪ್ಪರಗಿ, ಹಣಮಂತ ಶಿಗ್ಗಾಂವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.