ಬೆಂಗಳೂರು: ‘ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯಕ್ಕೆ ವೈದ್ಯರ ಬೇಜವಾಬ್ದಾರಿಯೇ ಕಾರಣ’ ಎಂದು ಆರೋಪಿಸಿ ದೃಷ್ಟಿ ಕಳೆದುಕೊಂಡವರು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನೇತೃತ್ವದಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಳೆದ ಜುಲೈ 9ರಂದು ಶಸ್ತ್ರಚಿಕಿತ್ಸೆಗೆ ಒಳಪಟ್ಟ 24 ಮಂದಿಯಲ್ಲಿ ಕೆಲವರಿಗೆ ಮಾತ್ರ ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಬಂದಿತ್ತು. ಉಳಿದವರಿಗೆ ಕೂಡಾ ದೃಷ್ಟಿ ಬರುವುದಾಗಿ ವೈದ್ಯರು ಭರವಸೆ ನೀಡಿದ್ದರು. ಆದರೆ, ಈವರೆಗೂ ದೃಷ್ಟಿ ಬರದ ಹಿನ್ನೆಲೆಯಲ್ಲಿ8 ಮಂದಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಆಸ್ಪತ್ರೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರು ಸಮಾಧಾನ ಮಾಡುವ ಪ್ರಯತ್ನ ನಡೆಸಿದರೂ ಯಶಸ್ಸು ಸಿಗಲಿಲ್ಲ. ಇದರಿಂದ ಕೆಲಹೊತ್ತು ಪರಿಸ್ಥಿತಿ ಕೈ ಮೀರುವ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಕಾರರನ್ನು ಚದುರಿಸಲು ಯಶಸ್ವಿಯಾದರು.
‘ದೃಷ್ಟಿ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡೆವು. ಆದರೆ, ಇದೀಗ ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಕಳೆದುಕೊಂಡಿದ್ದೇವೆ. ಅಷ್ಟೇ ಅಲ್ಲ, ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ.ಇದೀಗ ವೈದ್ಯರು ಕೈಚೆಲ್ಲಿದ್ದು, ದೃಷ್ಟಿ ಬರುತ್ತದೆ ಎಂಬ ಭರವಸೆಯನ್ನು ಕಳೆದುಕೊಂಡಿದ್ದೇವೆ. ಜೀವನ ನಡೆಸುವುದು ಕೂಡಾ ಕಷ್ಟವಾಗಿದ್ದು, ದಾರಿ ಕಾಣದಂತಾಗಿದೆ. ಆಸ್ಪತ್ರೆಯ ವೈದ್ಯರು ಸರ್ಕಾರದಿಂದ ಅಗತ್ಯ ಪರಿಹಾರವನ್ನು ಒದಗಿಸಬೇಕು’ ಎಂದು ದೃಷ್ಟಿ ಕಳೆದುಕೊಂಡವರು ಒತ್ತಾಯಿಸಿದರು.
‘ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದೆ. ಶಸ್ತ್ರಚಿಕಿತ್ಸೆ ಬಳಿಕ ಎಲ್ಲೂ ಹೋಗಲು ಆಗುತ್ತಿಲ್ಲ.ಎಡಗಣ್ಣಿಗೆ ಹೊಲಿಗೆ ಹಾಕಿದ್ದು, ದೃಷ್ಟಿ ಬರುವ ವಿಶ್ವಾಸವಿಲ್ಲ. ಕಣ್ಣಿಗೆ ಹಾಕಿದಹೊಲಿಗೆಯನ್ನು ಇನ್ನೂ ತೆಗೆಯದಿರುವುದರಿಂದ ಕಣ್ಣು ನೋವಾಗುತ್ತಿದೆ. ಹೊಲಿಗೆ ತೆಗೆಯಲು ಹೇಳಿದರೆ ಬೇಡವೆಂದು ವೈದ್ಯರು ಹೇಳುತ್ತಾರೆ. ನೋವು ನಿವಾರಣೆಗೆ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ಮನವಿ ಮಾಡಿದರೆ ಡ್ರಾಪ್ಸ್ ಹಾಕಿಕೊಳ್ಳಲು ಸೂಚಿಸುತ್ತಾರೆ’ ಎಂದುಕಾಟನ್‍ಪೇಟೆ ನಿವಾಸಿಶಾರದಮ್ಮ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.