ಬೆಳಗಾವಿ: ಕಾಂಗ್ರೆಸ್ ಮುಖಂಡ ಮಹಮ್ಮದ್ ಶಫಿ ಬೆಣ್ಣಿ ಅವರ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರದ್ದೇ ಸ್ನೇಹಿತ ನಾಗರಾಜ ಮಾಳಿ ಎಂಬುವರನ್ನು ಪೊಲೀಸರು ಭಾನುವಾರ ರಾತ್ರಿ ರಾಮದುರ್ಗದಲ್ಲಿ ಬಂಧಿಸಿದ್ದಾರೆ.
‘ತನಗೆ ಹಣಕಾಸಿನ ಸಹಾಯ ಮಾಡದ ಮಹಮ್ಮದ್ ಹಾಗೂ ತನ್ನನ್ನು ಕೆಲಸದಿಂದ ತೆಗೆದಿದ್ದ ಮಾಜಿ ಶಾಸಕ ಅಶೋಕ ಪಟ್ಟಣ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾಗಿ ನಾಗರಾಜ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಲವು ವರ್ಷಗಳ ಸ್ನೇಹಿತ
ರಾಮದುರ್ಗ ಸಮೀಪದ ಕಂಕಣವಾಡಿಯಲ್ಲಿ 15 ವರ್ಷಗಳ ಕಾಲ ಕಂಪ್ಯೂಟರ್ ಕೇಂದ್ರವನ್ನು ನಾಗರಾಜ ಮಾಳಿ ನಿರ್ವಹಿಸಿದ್ದರು. ಇತ್ತೀಚೆಗೆ ನಷ್ಟ ಉಂಟಾಗಿದ್ದರಿಂದ ಸ್ಥಗಿತಗೊಳಿಸಿದ್ದರು. ಮಹಮ್ಮದ್ ಜೊತೆ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಅಶೋಕ ಪಟ್ಟಣ ಶಾಸಕರಾಗಿದ್ದಾಗ ಅವರ ಬಳಿ ಕಂಪ್ಯೂಟರ್ ಆಪರೇಟರ್ ಆಗಿಯೂ ಕೆಲಸ ಮಾಡಿದ್ದರು.
ಫೇಸ್‌ಬುಕ್ ತೆರೆದುಕೊಟ್ಟಿದ್ದೇ ಇವರು!:
ಮಹಮ್ಮದ್ ಅವರಿಗೆ ನಾಗರಾಜ ಅವರೇ ಫೇಸ್‌ಬುಕ್ ಅಕೌಂಟ್ ತೆರೆದುಕೊಟ್ಟಿದ್ದರು. ಅದಕ್ಕೆ ಪಾಸ್‌ವರ್ಡ್ ಕೂಡ ಅವರೇ ನೀಡಿದ್ದರು. ಹೀಗಾಗಿ ಮಹಮ್ಮದ್ ಜೊತೆ ನಾಗರಾಜ ಕೂಡ ಈ ಅಕೌಂಟ್‌ನಲ್ಲಿ ಆಗಾಗ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದರು.
ಹಣಕಾಸಿನ ಮುಗ್ಗಟ್ಟು
ಕಂಪ್ಯೂಟರ್ ಕೇಂದ್ರ ಸ್ಥಗಿತಗೊಳಿಸಿದ ನಂತರ ನಾಗರಾಜ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಹಲವು ಬಾರಿ ಹಣ ಕೇಳಿದ್ದರೂ ಮಹಮ್ಮದ್ ಕೊಟ್ಟಿರಲಿಲ್ಲ. ಇನ್ನೊಂದೆಡೆ, ಅಶೋಕ ಪಟ್ಟಣ ಚುನಾವಣೆಯಲ್ಲಿ ಪರಾಭವಗೊಂಡ ನಂತರ ನಾಗರಾಜ ಅವರನ್ನು ಕೆಲಸದಿಂದ ತೆಗೆದಿದ್ದರು.
ಇಬ್ಬರ ಮೇಲೆಯೂ ಸೇಡು ತೀರಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ನಾಗರಾಜ ತಮ್ಮದೇ ಮೊಬೈಲ್‌ನಿಂದ ಮಹಮ್ಮದ್ ಅವರ ಫೇಸ್‌ಬುಕ್ ತೆರೆದು ಪಾಕಿಸ್ತಾನ ಹಾಗೂ ಅಶೋಕ ಪಟ್ಟಣ ಪರ ಸಂದೇಶವನ್ನು ಪೋಸ್ಟ್ ಮಾಡಿದ್ದರು. ನಂತರ ತಮ್ಮ ಹಲವು ಸ್ನೇಹಿತರಿಗೆ ಫೋನ್ ಮಾಡಿ, ಈ ವಿಷಯವನ್ನು ತಿಳಿಸಿದ್ದರು.
ಫೇಸ್‌ಬುಕ್ ಸಂದೇಶವನ್ನು ನೋಡಿದ ಜನರು ರೊಚ್ಚಿಗೆದ್ದು, ಮಹಮ್ಮದ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ, ಕಲ್ಲು ತೂರಾಟ ನಡೆಸಿದ್ದರು. ಅಲ್ಲದೇ, ಬೃಹತ್ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.