ADVERTISEMENT

ಆರು ಸಂತ್ರಸ್ತ ಕುಟುಂಬಗಳ ದತ್ತು

‘ಬೆಳಗಾವಿ ಫೇಸ್‌ಬುಕ್‌ ಪುಟ’ ತಂಡದಿಂದ ಸೇವಾ ಕಾರ್ಯ

ಎಂ.ಮಹೇಶ
Published 12 ಜನವರಿ 2020, 20:00 IST
Last Updated 12 ಜನವರಿ 2020, 20:00 IST
ಬೆಳಗಾವಿ ಫೇಸ್‌ಬುಕ್‌ ತಂಡದ ಸದಸ್ಯರು ಸಂತ್ರಸ್ತ ಮಹಿಳೆಯೊಬ್ಬರಿಗೆ ಅಗತ್ಯ ಸಾಮಗ್ರಿಗಳನ್ನು ಈಚೆಗೆ ನೀಡಿದರು
ಬೆಳಗಾವಿ ಫೇಸ್‌ಬುಕ್‌ ತಂಡದ ಸದಸ್ಯರು ಸಂತ್ರಸ್ತ ಮಹಿಳೆಯೊಬ್ಬರಿಗೆ ಅಗತ್ಯ ಸಾಮಗ್ರಿಗಳನ್ನು ಈಚೆಗೆ ನೀಡಿದರು   

ಬೆಳಗಾವಿ: ಎಚ್‌ಐವಿ ಬಾಧಿತರೂ ಆಗಿರುವ ಮತ್ತು ಪ್ರವಾಹದಿಂದ ಸಂತ್ರಸ್ತರಾದ ಮಹಿಳೆಯರ ಆರು ಕುಟುಂಬಗಳನ್ನು ಇಲ್ಲಿನ ‘ಬೆಳಗಾವಿ ಫೇಸ್‌ಬುಕ್‌ ಪುಟ’ದ ತಂಡದವರು ದತ್ತು ಪಡೆದಿದ್ದಾರೆ. ಸಾಮಾಜಿಕ ಜಾಲತಾಣವನ್ನು ಬಳಸಿ, ದೇಣಿಗೆ ಸಂಗ್ರಹಿಸಿ ಬಡ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಖಡಕಲಾಟ, ಅಕ್ಕೋಳ, ಸಿದ್ಧನಾಳ, ನಿಪ್ಪಾಣಿ ತಾಲ್ಲೂಕಿನ ನಾಯಿಂಗ್ಲಜ, ಹುಕ್ಕೇರಿ ತಾಲ್ಲೂಕಿನ ನಾಗನೂರ ಹಾಗೂ ಅರ್ಜುನವಾಡದ ಕುಟುಂಬಗಳಿಗೆ ಮುಂದಿನ 6 ತಿಂಗಳವರೆಗೆ ಅಗತ್ಯವಾದ ಅಕ್ಕಿ ಸೇರಿದಂತೆ ದವಸಧಾನ್ಯ, ಅಡುಗೆ ಎಣ್ಣೆ, ಸಾಬೂನು, ಟೂತ್‌ಪೇಸ್ಟ್‌, ಬ್ರಶ್‌, ಬೆಲ್ಲ, ಸಕ್ಕರೆ, ಕಾಳುಗಳು ಮೊದಲಾದ ಸಾಮಗ್ರಿಗಳನ್ನು ಕೊಡಿಸುವುದು ಅವರ ಉದ್ದೇಶವಾಗಿದೆ.

ಹಲವರಿಂದ ಸ್ಪಂದನೆ: ನೆರೆ ಸಂದರ್ಭದಲ್ಲೂ ಹಲವು ಕುಟುಂಬಗಳಿಗೆ ನೆರವಾಗಿದ್ದ ತಂಡದವರು ಈಗ, ಕಡು ಬಡ ಕುಟುಂಬಗಳಿಗೆ ಆಸರೆಯಾಗಿವೆ.

ADVERTISEMENT

‘ಸಂತ್ರಸ್ತರಿಗೆ ನೆರವಾಗುವಂತೆ ಫೇಸ್‌ಬುಕ್‌ ಪುಟದಲ್ಲಿ ಕೋರಿದ್ದೆವು. ಇದಕ್ಕೆ ದಾನಿಗಳು ಸ್ಪಂದಿಸಿದರು. ನಮ್ಮ ತಂಡ, ಸ್ನೇಹಿತರ ದೇಣಿಗೆಯೂ ಸೇರಿ, ಒಟ್ಟು ₹3 ಲಕ್ಷ ಸಂಗ್ರಹವಾಗಿತ್ತು. ಇದರಲ್ಲಿ 6 ಕುಟುಂಬಗಳನ್ನು 6 ತಿಂಗಳವರೆಗೆ ದತ್ತು ಪಡೆದಿದ್ದೇವೆ. ಮಿಲಾಪ್‌ (MILAAP) ಮತ್ತು ಆಲ್‌ ಓಕೆ (ALL OK) ತಂಡಗಳು ದೇಣಿಗೆ ಸಂಗ್ರಹಿಸಲು ನೆರವಾಗಿವೆ. ಮೃಣಾಲಿನಿ ಪ್ರತಿಷ್ಠಾನ ಹಾಗೂ ಆಶ್ರಯ ಪ್ರತಿಷ್ಠಾನದ ಮೂಲಕ ಕುಟುಂಬಗಳನ್ನು ಆಯ್ಕೆ ಮಾಡಿದ್ದೇವೆ’ ಎಂದು ಮುಖ್ಯ ಅಡ್ಮಿನ್‌ ಕಿರಣ ಮಾಳನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಟುಂಬವೊಂದಕ್ಕೆ ತಿಂಗಳಿಗೆ ಸರಾಸರಿ ₹ 5ಸಾವಿರ ಖರ್ಚಾಗಲಿದೆ. ಕೆಲವು ಕುಟುಂಬಗಳಿಗೆ ಅಗತ್ಯ ಸಾಮಾಗ್ರಿ ಒದಗಿಸುತ್ತೇವೆ. ಕೆಲವರಿಗೆ ನಿರ್ದಿಷ್ಟ ಅಂಗಡಿಯಲ್ಲಿ ಖರೀದಿಸಲು ತಿಳಿಸಿದ್ದೇವೆ. ನೆರೆಯಿಂದ ಮನೆ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡ ಕುಟುಂಬಗಳನ್ನು ಆಯ್ಕೆ ಮಾಡಿದ್ದೇವೆ. ಈಗಾಗಲೇ ಒಂದು ತಿಂಗಳ ದಿನಸಿ ವಿತರಣೆ ಮಾಡಲಾಗಿದೆ. ಇನ್ನೈದು ತಿಂಗಳು ಅವರಿಗೆ ನೆರವಿನ ಹಸ್ತ ಚಾಚಲಾಗುತ್ತದೆ. ಕೈಲಾದಷ್ಟು ನೆರವು ನೀಡಿದ ಸಮಾಧಾನ ನಮ್ಮದು. ಇದಕ್ಕೆ ನೆರವಾದವರೆಲ್ಲರನ್ನೂ ಸ್ಮರಿಸುತ್ತೇವೆ’ ಎನ್ನುತ್ತಾರೆ ಅವರು.

‘ಕೃಷ್ಣಾ ನದಿ ಪ್ರವಾಹದಿಂದಾಗಿ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿದ್ದೇವೆ. ಕುಟುಂಬ ನಿರ್ವಹಣೆಗೆ ಪರದಾಡುತ್ತಿರುವಾಗ ಯುವಕರು ಅಗತ್ಯ ಸಾಮಗ್ರಿಗಳನ್ನು ಕೊಡಿಸಿದ್ದಾರೆ. ಅದಕ್ಕಾಗಿ ಅವರನ್ನು ನೆನೆಯುತ್ತೇನೆ’ ಎಂದು ಚಿಕ್ಕೋಡಿ ತಾಲ್ಲೂಕು ಖಡಕಲಾಟದ ಮಹಿಳೆ ಪ್ರತಿಕ್ರಿಯಿಸಿದರು.

40 ಎಚ್‌ಐವಿ ಪೀಡಿತರಿಗೆ ಆಶ್ರಯ ಪ್ರತಿಷ್ಠಾನದ ಮೂಲಕ, ₹ 15ಸಾವಿರ ವೆಚ್ಚದಲ್ಲಿ ಪೌಷ್ಟಿಕಾಂಶದ ಮಾತ್ರೆ, ಮೂರು ಶಾಲೆಗಳ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸಿದ್ದೇವೆ
-ಕಿರಣ ಮಾಳನ್ನವರ
ಬೆಳಗಾವಿ ಫೇಸ್‌ಬುಕ್‌ ಪುಟದ ಅಡ್ಮಿನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.