ADVERTISEMENT

ಬೆಂಗಳೂರು | ಸುಳ್ಳು ಜಾತಿ ಪ್ರಮಾಣಪತ್ರ: ಮಾಹಿತಿ ಕೇಳಿದ ಸಮಾಜ ಕಲ್ಯಾಣ ಇಲಾಖೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 16:10 IST
Last Updated 1 ಅಕ್ಟೋಬರ್ 2023, 16:10 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ಬೆಂಗಳೂರು: ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪುತ್ರಿ ಎಂ.ಆರ್‌. ಚೇತನ ಸೇರಿದಂತೆ ನಾಲ್ವರ ಮೇಲೆ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ (ಎಡಿಜಿಪಿ) ಸಮಾಜ ಕಲ್ಯಾಣ ಇಲಾಖೆಯ ಬೆಂಗಳೂರು ನಗರ ಜಿಲ್ಲೆಯ ಜಂಟಿ ಉಪ ನಿರ್ದೇಶಕರು ಪತ್ರ ಬರೆದಿದ್ದಾರೆ.

‘ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಇತರೆ ಹಿಂದುಳಿದ ಜಾತಿ (ಮೀಸಲಾತಿ ಅಥವಾ ನೇಮಕಾತಿ ಇತರ) ಕಾಯ್ದೆ– 1990’ರ ಸೆಕ್ಷನ್‌ 4 ಎಫ್‌ ಅಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರು ಎಂ.ಆರ್‌. ಚೇತನ, ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ದಾರಕೇಶ್ವರಯ್ಯ, ಬಿ.ಎಂ. ವಾಗೀಶ್‌ ಮತ್ತು ವಾಗೀಶ್‌ ಅವರ ಪತ್ನಿ ಪುಷ್ಪಾ ಡಿ.ಎಂ. ಎಂಬವರ ಜಾತಿ ಪ್ರಮಾಣಪತ್ರಗಳನ್ನು ರದ್ದುಪಡಿಸಿ 2023ರ ಏಪ್ರಿಲ್‌ 19 ಮತ್ತು ಜೂನ್‌ 27ರಂದು ಆದೇಶ ಹೊರಡಿಸಿದ್ದರು.

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಇದೇ 30ರಂದು ನೀಡಿರುವ ಮೌಖಿಕ ಆದೇಶವನ್ನು ಉಲ್ಲೇಖಿಸಿ, ಈ ನಾಲ್ವರ ಜಾತಿ ಪ್ರಮಾಣಪತ್ರ ರದ್ದುಪಡಿಸಿ ಮಾಡಿದ ಆದೇಶವನ್ನೂ ಲಗತ್ತಿಸಿ ಎಡಿಜಿಪಿಗೆ ಪತ್ರ ಬರೆದಿರುವ ಜಂಟಿ ಉಪ ನಿರ್ದೇಶಕರು, ಈ ಆದೇಶಗಳ ಅನ್ವಯ ತೆಗೆದುಕೊಂಡ ಕ್ರಮದ ಮಾಹಿತಿ ನೀಡುವಂತೆ ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.