ADVERTISEMENT

ಕಿಸಾನ್‌ ಸಮ್ಮಾನ್‌ ಸಹಾಯಧನಕ್ಕೆ ಸುಳ್ಳು ಮಾಹಿತಿ: ಹಣ ಹಿಂದಿರುಗಿಸಲು ನೋಟಿಸ್‌

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲೂ ವಂಚನೆ

ಜೆ.ಆರ್.ಗಿರೀಶ್
Published 4 ನವೆಂಬರ್ 2020, 19:30 IST
Last Updated 4 ನವೆಂಬರ್ 2020, 19:30 IST
ಕಿಸಾನ್‌ ಸಮ್ಮಾನ್‌ ಲಾಂಛನ
ಕಿಸಾನ್‌ ಸಮ್ಮಾನ್‌ ಲಾಂಛನ    

ಕೋಲಾರ: ಆದಾಯ ತೆರಿಗೆ ಪಾವತಿಸುವ ರಾಜ್ಯದ ಸಾವಿರಾರು ರೈತರು ಕೇಂದ್ರ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಸಹಾಯಧನ ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಆದಾಯ ತೆರಿಗೆ ಪಾವತಿಯ ಸಂಗತಿಯನ್ನು ಮರೆಮಾಚಿ ಸಹಾಯಧನ ಪಡೆದ ರಾಜ್ಯದ 85,208 ರೈತರನ್ನು ಕೇಂದ್ರ ಕೃಷಿ ಸಚಿವಾಲಯ ಪರಿಶೀಲನೆ ವೇಳೆ ಪತ್ತೆ ಹಚ್ಚಿದೆ. ಈ ರೈತರ ಪಟ್ಟಿಯನ್ನು ಕೇಂದ್ರ ಕೃಷಿ ಸಚಿವಾಲಯ ಈಗಾಗಲೇ ರಾಜ್ಯ ಸರ್ಕಾರಕ್ಕೆ ರವಾನಿಸಿದೆ. ರಾಜ್ಯ ಕೃಷಿ ಇಲಾಖೆಯು ಸಹಾಯಧನ ಹಿಂದಿರುಗಿಸುವಂತೆ ಫಲಾನುಭವಿ ರೈತರಿಗೆ ನೋಟಿಸ್‌ ಜಾರಿ ಮಾಡುತ್ತಿದೆ.

ವಂಚನೆ ಬೆಳಕಿಗೆ ಬಂದಿದ್ದು ಹೇಗೆ?: ಕೇಂದ್ರ ಕೃಷಿ ಸಚಿವಾಲಯವು ಫಲಾನುಭವಿಗಳ ಆಧಾರ್‌ ಕಾರ್ಡ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆ ವಿವರ ಪರಿಶೀಲಿಸಿದಾಗ ಸಾಕಷ್ಟು ರೈತರು ಆದಾಯ ತೆರಿಗೆ ಪಾವತಿದಾರರಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ADVERTISEMENT

ಸಚಿವಾಲಯ ಇಂತಹ ರೈತರ ಪಟ್ಟಿಯನ್ನು ಕೃಷಿ ಇಲಾಖೆಗೆ ರವಾನಿಸಿದೆ. ಕೃಷಿ ಇಲಾಖೆ ಆಯುಕ್ತರು ಈ ರೈತರಿಂದ ಸಹಾಯಧನ ಹಿಂಪಡೆಯುವಂತೆ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಜಿಲ್ಲಾ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು ರೈತರಿಂದ ಸಹಾಯಧನ ವಸೂಲು ಮಾಡಲು ಮುಂದಾಗಿದ್ದಾರೆ. ಡಿಮಾಂಡ್‌ ಡ್ರಾಫ್ಟ್‌ (ಡಿ.ಡಿ) ಮೂಲಕ ಸಹಾಯಕ ನಿರ್ದೇಶಕರ ಕಚೇರಿಗೆ ಸಹಾಯಧನ ಹಿಂದಿರುಗಿಸುವಂತೆ ರೈತರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.ಒಂದು ವೇಳೆ ಸಹಾಯಧನ ಹಿಂದಿರುಗಿಸದಿದ್ದರೆ ಇಲಾಖೆಯಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ತಡೆ ಹಿಡಿಯುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಸಹಾಯಧನಕ್ಕೆ ರಾಜ್ಯದಲ್ಲಿ ಈವರೆಗೆ 56,74,940 ರೈತರು ಹೆಸರು ನೋಂದಾಯಿಸಿದ್ದಾರೆ. ವಿವಿಧ ಹಂತದ ಪರಿಶೀಲನೆ ನಂತರ 52,68,327 ರೈತರಿಗೆ ಸಹಾಯಧನ ಬಿಡುಗಡೆಯಾಗಿದೆ. ಸಹಾಯಧನ ಪಡೆದಿರುವ ರೈತರ ಪೈಕಿ 85,208 ಮಂದಿ ಆದಾಯ ತೆರಿಗೆ ಪಾವತಿಸುತ್ತಿರುವ ಸಂಗತಿ ಪರಿಶೀಲನೆ ಯಿಂದ ಗೊತ್ತಾಗಿದೆ.

***

ಹಲವು ರೈತರು ಆದಾಯ ತೆರಿಗೆ ಪಾವತಿದಾರರಾಗಿದ್ದರೂ ಸಹಾಯಧನ ಪಡೆದಿದ್ದಾರೆ. ಸಹಾಯಧನ ಹಿಂದಿರುಗಿಸುವಂತೆ ಅವರಿಗೆ ನೋಟಿಸ್‌ ನೀಡುತ್ತಿದ್ದಾರೆ.

- ಶ್ರೀನಿವಾಸ್,ಕೃಷಿ ಇಲಾಖೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.