ADVERTISEMENT

ನಕಲಿ ಅಂಕ ಪಟ್ಟಿ : ಬೆಂಗಳೂರಿನ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಮೇಲೆ ಸಿಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 7:08 IST
Last Updated 6 ಡಿಸೆಂಬರ್ 2022, 7:08 IST
ಜಪ್ತಿ ‌ಮಾಡಲಾದ ನಕಲಿ ಅಂಕಪಟ್ಟಿ‌ ಹಾಗೂ ವಿವಿಧ ವಿಶ್ವವಿದ್ಯಾಲಯದ ಮುದ್ರೆಗಳನ್ನು ಕಮಿಷನರ್ ಪ್ರತಾಪ್ ರೆಡ್ಡಿ ವೀಕ್ಷಿಸಿದರು. ಸಿಸಿಬಿ ಜಂಟಿ ಕಮಿಷನರ್ ಎಸ್.ಡಿ. ಶರಣಪ್ಪ ಇದ್ದಾರೆ.
ಜಪ್ತಿ ‌ಮಾಡಲಾದ ನಕಲಿ ಅಂಕಪಟ್ಟಿ‌ ಹಾಗೂ ವಿವಿಧ ವಿಶ್ವವಿದ್ಯಾಲಯದ ಮುದ್ರೆಗಳನ್ನು ಕಮಿಷನರ್ ಪ್ರತಾಪ್ ರೆಡ್ಡಿ ವೀಕ್ಷಿಸಿದರು. ಸಿಸಿಬಿ ಜಂಟಿ ಕಮಿಷನರ್ ಎಸ್.ಡಿ. ಶರಣಪ್ಪ ಇದ್ದಾರೆ.   

ಬೆಂಗಳೂರು: ದೇಶದ ಹಲವು ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ‌ ಅಂಕಪಟ್ಟಿ ಸೃಷ್ಟಿಸಿ ಮಾರುತ್ತಿದ್ದ ಆರೋಪದಡಿ ನಗರದಲ್ಲಿರುವ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಕಚೇರಿಗಳ‌ ಮೇಲೆ ಸಿಸಿಬಿ‌ ಪೊಲೀಸರು ದಾಳಿ‌ ಮಾಡಿದ್ದಾರೆ.


'ನಗರದ ನಿವಾಸಿಯೊಬ್ಬರು ಜಾಲತಾಣದ ಮೂಲಕ ಇನ್‌ಸ್ಟಿಟ್ಯೂಟ್ ಸಿಬ್ಬಂದಿಯನ್ನು ಸಂಪರ್ಕಿಸಿ ₹ 40 ಸಾವಿರ ಕೊಟ್ಟಿದ್ದರು. ಆರೋಪಿಗಳು ಅವರಿಗೆ ಬಿ.ಕಾಂ ಮೊದಲ ಹಾಗೂ ಎರಡನೇ ವರ್ಷದ ಅಂಕಪಟ್ಟಿ ನೀಡಿದ್ದರು. ಕೊನೆ ವರ್ಷದ ಅಂಕಪಟ್ಟಿ ಕೇಳಿದಾಗ, ಮತ್ತಷ್ಟು ಹಣ ಕೇಳಿದ್ದರು. ಆಗ, ಅಂಕಪಟ್ಟಿ ಬಗ್ಗೆ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿತ್ತು. ಬಳಿಕ ನಿವಾಸಿ, ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು' ಎಂದು ಕಮಿಷನರ್ ಪ್ರತಾಪ್‌ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


'ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು. ಮಹಾಲಕ್ಷ್ಮಿ ಲೇಔಟ್, ಮಾರತ್ತಹಳ್ಳಿ ಹಾಗೂ ಕೊಡಿಗೇಹಳ್ಳಿಯಲ್ಲಿರುವ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಮೇಲೆ‌ ದಾಳಿ ಮಾಡಿ‌ ಶ್ರೀನಿವಾಸ್ ರೆಡ್ಡಿ‌ ಹಾಗೂ ಇತರರನ್ನಯ ಬಂಧಿಸಲಾಗಿದೆ' ಎಂದರು.

ADVERTISEMENT


'ಎಸ್ಸೆಸ್ಸೆಲ್ಸಿ, ಪಿಯುಸಿ, ಬಿ.ಎ, ಬಿ.ಕಾಂ, ಬಿಎಸ್ಸಿ, ಬಿಬಿಎ, ಎಂಜಿನಿಯರಿಂಗ್, ಎಂಬಿಎ ಕೋರ್ಸ್‌ಗಳ ನಕಲಿ ಅಂಕಪಟ್ಟಿಗಳನ್ನು ಹಾಗೂ ₹1 ಲಕ್ಷ ಜಪ್ತಿ ಮಾಡಲಾಗಿದೆ' ಎಂದು ಅವರು ಹೇಳಿದರು.


'ದೂರ ಶಿಕ್ಷಣ ಹೆಸರಿನಲ್ಲಿ ಜಾಹೀರಾತು ನೀಡುತ್ತಿದ್ದ ಆರೋಪಿಗಳು, ತಮ್ಮನ್ನು ಸಂಪರ್ಕಿಸುತ್ತಿದ್ದ ವಿದ್ಯಾರ್ಥಿಗಳಿಗೆ ನೇರವಾಗಿ‌ ಅಂಕಪಟ್ಟಿ ನೀಡುವುದಾಗಿ ಹೇಳುತ್ತಿದ್ದರು. ₹20 ಸಾವಿರದಿಂದ ₹ 1 ಲಕ್ಷದವರೆಗೂ ಹಣ ಪಡೆದು ಅಂಕಪಟ್ಟಿ ಕೊಡುತ್ತಿದ್ದರು. ₹10 ಲಕ್ಷದಿಂದ ₹ 20 ಲಕ್ಷ ಹಣ ಪಡೆದು ವಿವಿದ ವಿಶ್ವವಿದ್ಯಾಲಯಗಳ ಪಿಎಚ್‌ಡಿ ಪದವಿಯ ಪ್ರಮಾಣ ಪತ್ರಗಳನ್ನೂ‌ ಆರೋಪಿಗಳು ಮಾರುತ್ತಿದ್ದ ಮಾಹಿತಿ ಇದೆ. ತನಿಖೆ‌ ಮುಂದುವರಿದಿದೆ' ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.


'ಉತ್ತರ ಪ್ರದೇಶ, ಗುಜರಾತ್, ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.