ಬೆಂಗಳೂರು: ಕೊಪ್ಪಳ ವಿಧಾನಸಭೆ ಕ್ಷೇತ್ರದಿಂದ ಸಿ.ವಿ. ಚಂದ್ರಶೇಖರ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿರುವುದಾಗಿ ಪ್ರಜಾವಾಣಿಯಲ್ಲಿ ವರದಿಯಾಗಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ.
2023ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ 'ಬೃಹತ್ ಮಹಿಳಾ ಕರಕುಶಲ ವಸ್ತು ಪ್ರದರ್ಶನ, ಮಾರಾಟ ಮತ್ತು ಕೌಶಲ ಅಭಿವೃದ್ಧಿ ಮೇಳ' ಬುಧವಾರ ನಡೆದಿತ್ತು. ಸಚಿವರು ಈ ಕಾರ್ಯಕ್ರಮಕ್ಕೆ ತೆರಳುವಾಗ ಮುನಿರಾಬಾದ್ ಬಳಿ ಮಾಧ್ಯಮದವರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ್ದಾರೆ ಎಂದು ಹಂಚಿಕೆಯಾಗುತ್ತಿರುವ ಸುಳ್ಳು ಸುದ್ದಿಯಲ್ಲಿ ಹೇಳಲಾಗಿದೆ.
ಆದರೆ, ಶೋಭಾ ಕರಂದ್ಲಾಜೆ ಅವರು ಈ ರೀತಿ ಹೇಳಿದ್ದಾರೆ ಎಂಬ ಸುದ್ದಿ ಪ್ರಜಾವಾಣಿಯಲ್ಲಿ ಪ್ರಕಟವಾಗಿಲ್ಲ.
ಇಂತಹ ಪೋಸ್ಟ್ ಮೂಲಕ ಪ್ರಜಾವಾಣಿ ಪತ್ರಿಕೆಯ 'ವಿಶ್ವಾಸಾರ್ಹತೆ'ಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ
ಹಾಗೆಯೇ, ಯಾವುದೇ ಕ್ಷೇತ್ರದ ಸಂಸದರನ್ನು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಸದಿರಲು ಪಕ್ಷವು ತೀರ್ಮಾನಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿರುವುದಾಗಿ ಮತ್ತೊಂದು ಪೋಸ್ಟ್ ಹರಿದಾಡುತ್ತಿದೆ.
'ಪ್ರಜಾವಾಣಿ' ವರದಿ ಎಂದು ಹೇಳಲಾಗಿರುವ ಈ ಪೋಸ್ಟ್‌ನಲ್ಲಿ ನಳಿನ್ ಕುಮಾರ್ ಅವರು 'ವಿಜಯ ಕರ್ನಾಟಕ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ' ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಇದು ಸುಳ್ಳು ಸುದ್ದಿ ಎಂಬುದು ಖಚಿತವಾಗುತ್ತದೆ.
ಹಂಚಿಕೆಯಾಗುತ್ತಿರುವ ಚಿತ್ರಗಳಲ್ಲಿರುವ ಅಕ್ಷರ ವಿನ್ಯಾಸ (ಫಾಂಟ್) ಪ್ರಜಾವಾಣಿಯದ್ದಲ್ಲ ಎಂಬುದು ಓದುಗರಿಗೆ ಸ್ಪಷ್ಟವಾಗಿ ತಿಳಿಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.