ಮಂಡ್ಯ: ಸುಳ್ಳು ಸುದ್ದಿಯಿಂದಾಗಿ ಡ್ಯಾಂ ಬಿರುಕಿನ ಬಗ್ಗೆ ಗೊಂದ ಸೃಷ್ಟಿಯಾಗಿದೆ ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ.
‘ಕೆಆರ್‌ಎಸ್‌ನಲ್ಲಿ ಕ್ರಸ್ಟ್‌ಗೇಟ್ ಬದಲಾವಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ವೇಳೆ ಗೇಟ್‌ನ ಕಲ್ಲುಗಳನ್ನು ತೆಗೆಯಲಾಗಿತ್ತು. ಕಿಡಿಗೇಡಿಗಳು ಅದರ ವಿಡಿಯೊ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ, ಕೆಆರ್‌ಎಸ್ ಬಿರುಕು ಬಿಟ್ಟಿದೆ ಎಂದು ಸುದ್ದಿ ಹರಡಿಸಿದ್ದರು. ಸುಳ್ಳುಸುದ್ದಿಯಿಂದಾಗಿಯೇ ಗೊಂದಲ ಸೃಷ್ಟಿಯಾಗಿದೆ’ ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ.
ಇದಕ್ಕೂ ಮುನ್ನ ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಾವೇರಿ ನೀರಾವರಿ ನಿಗಮದ ಎಂಡಿ, ಕೆಆರ್‌ಎಸ್ ಜಲಾಶಯದ ಸುರಕ್ಷತೆಯ ಸ್ಪಷ್ಟನೆ ನೀಡಿದ್ದಾರೆ. ’ಅಣೆಕಟ್ಟೆ ಸುರಕ್ಷತಾ ಪರಿಶೀಲನಾ ಸಮಿತಿ (ಡಿಎಸ್‌ಆರ್‌ಪಿ) ಸಮಗ್ರವಾಗಿ ಪರೀಕ್ಷೆ ನಡೆಸಿದ್ದು ಅಣೆಕಟ್ಟೆಯಲ್ಲಿ ಯಾವುದೇ ಬಿರುಕು ಕಂಡುಬಂದಿಲ್ಲ’ ಎಂದು ತಿಳಿಸಿದ್ದರು.
’ಪ್ರತಿವರ್ಷ ಮುಂಗಾರು ಆರಂಭವಾಗುವುದಕ್ಕೂ ಮೊದಲು, ಮುಂಗಾರಿನ ನಂತರ ಸಮಿತಿಯ ಸದಸ್ಯರು ಅಣೆಕಟ್ಟೆ ಸುರಕ್ಷತೆಯ ಪರಿಶೀಲನೆ ನಡೆಸುತ್ತಾರೆ. ವರದಿಯನ್ನು ಅಣೆಕಟ್ಟೆ ಭದ್ರತಾ ವಿಭಾಗ ಹಾಗೂ ನಿಗಮಕ್ಕೆ ಸಲ್ಲಿಸುತ್ತಾರೆ. ಈಗಾಗಲೇ ಪೂರ್ವ ಮುಂಗಾರು ವರದಿ ಬಂದಿದ್ದು ಜಲಾಶಯ ಸುರಕ್ಷಿತವಾಗಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
’ಸದಸ್ಯರು ನೀಡಿದ ವರದಿ ಆಧರಿಸಿ ಮೊದಲ ಹಂತದ ಅಣೆಕಟ್ಟೆ ಪುನಶ್ಚೇತನ ಕಾಮಗಾರಿ ನಡೆಸಲಾಗಿದೆ. ಜಲಾಶಯದ 131ನೇ ಅಡಿಯ ಮಟ್ಟದಿಂದ 70ನೇ ಅಡಿ ಮಟ್ಟದವರೆಗೆ ಕಟ್ಟಡದ ಕಲ್ಲಿನ ಕೀಲುಗಳನ್ನು ಭದ್ರಗೊಳಿಸಲಾಗಿದೆ. ಪುನಶ್ಚೇತನ ಕಾಮಗಾರಿಗೆ ಮೆಚ್ಚುಗೆ ವ್ಯಕ್ತವಾಗಿದ್ದು ವಿಶ್ವಬ್ಯಾಂಕ್ ಮತ್ತು ರಾಷ್ಟ್ರೀಯ ಜಲ ಆಯೋಗದಿಂದ ರಾಷ್ಟ್ರಪ್ರಶಸ್ತಿ ದೊರಕಿದೆ’ ಎಂದು ತಿಳಿಸಿದ್ದಾರೆ.
’ಜುಲೈ 2ರಂದು ಅಣೆಕಟ್ಟೆ ಪುನಶ್ಚೇತನ ತಂತ್ರಜ್ಞರು ಹಾಗೂ ರಾಜ್ಯದ ಗೇಟ್ ಸಲಹಾ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದ್ದು ಜಲಾಶಯದಲ್ಲಿ ಯಾವುದೇ ಬಿರುಕು ಕಂಡುಬಂದಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.