ADVERTISEMENT

ಕೌಟುಂಬಿಕ ವ್ಯಾಜ್ಯದಲ್ಲಿ ಏಕಪಕ್ಷೀಯವಾಗಿ ವಿಚಾರಣೆ: ವಿಚ್ಛೇದನ ಆದೇಶ ರದ್ದು

ಸಮನ್ಸ್‌ ಜಾರಿ ಪ್ರಕ್ರಿಯೆ ದೋಷ ಎತ್ತಿಹಿಡಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 12 ಮೇ 2023, 16:01 IST
Last Updated 12 ಮೇ 2023, 16:01 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ದಂಪತಿ ಮಧ್ಯದ ಕೌಟುಂಬಿಕ ವ್ಯಾಜ್ಯವೊಂದರಲ್ಲಿ, ಪ್ರತಿವಾದಿ ಪತ್ನಿಗೆ ಸೂಕ್ತ ರೀತಿಯಲ್ಲಿ ಸಮನ್ಸ್ ಜಾರಿಗೊಳಿಸದೆ ಏಕಪಕ್ಷೀಯವಾಗಿ ವಿಚಾರಣೆ ನಡೆಸಿ ವಿಚ್ಛೇದನದ ಡಿಕ್ರಿ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿದೆ.

‘ಪತ್ನಿಗೆ ನೋಂದಾಯಿತ ಅಂಚೆ (ಆರ್‌ಪಿಎಡಿ) ಮೂಲಕ ಸಮನ್ಸ್ ಜಾರಿ ಮಾಡಲಾಗಿದೆ. ಅದರ ಲಕೋಟೆಯ ಮೇಲಿದ್ದ, ‘ಸ್ವೀಕರಿಸಿಲ್ಲ’ ಎಂಬ ಹಿಂಬರಹದ ಆಧಾರದಡಿ ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಏಕಪಕ್ಷೀಯವಾಗಿ ನಿರ್ಧರಿಸಿದೆ. ಸಮನ್ಸ್ ನೀಡುವ ವಿಚಾರದಲ್ಲಿ ಕೌಟುಂಬಿಕ ನ್ಯಾಯಾಲಯ ಅನುಸರಿಸಿರುವ ಈ ಕಾರ್ಯವಿಧಾನ ಸರಿಯಲ್ಲ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

‘ನಾಗರಿಕ ಪ್ರಕ್ರಿಯಾ ಸಂಹಿತೆಯ ನಿಯಮ 17ರ ಪ್ರಕಾರ ಪ್ರತಿವಾದಿಯು ಸಮನ್ಸ್ ಸ್ವೀಕೃತಿಗೆ ಸಹಿ ಹಾಕದಿದ್ದರೆ, ಸಮನ್ಸ್ ನೀಡುವ ಸಂದರ್ಭದಲ್ಲಿ ಮನೆಯಲ್ಲಿ ಇರದಿದ್ದರೆ, ಅಲ್ಲಿಗೆ ತೆರಳಿದ್ದ ಅಧಿಕಾರಿ ಪ್ರತಿವಾದಿ ಮನೆಯ ಮುಂಬಾಗಿಲಿನ ಮೇಲೆ ಅಥವಾ ಮನೆಯ ಯಾವುದಾದರೂ ಒಂದು ಎದ್ದು ಕಾಣಬಹುದಾದ ಜಾಗದಲ್ಲಿ ಸಮನ್ಸ್ ಪ್ರತಿ ಅಂಟಿಸಿ, ಮೂಲ ಪ್ರತಿಯನ್ನು ಕೋರ್ಟ್‌ಗೆ ಹಿಂದಿರುಗಿಸಬೇಕು. ಯಾವ ಕಾರಣಕ್ಕೆ ಹೀಗೇ ಮಾಡಲಾಗಿದೆ ಎಂಬುದನ್ನು, ಮನೆಯನ್ನು ಗುರುತಿಸಿದ ವ್ಯಕ್ತಿಯ ಹೆಸರು, ವಿಳಾಸ ಮತ್ತು ಯಾರ ಉಪಸ್ಥಿತಿಯಲ್ಲಿ ಸಮನ್ಸ್ ಕಾಪಿಯನ್ನು ಅಂಟಿಸಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಬೇಕು. ಆದರೆ, ಪ್ರಕರಣದಲ್ಲಿ ಈ ಪ್ರಕ್ರಿಯೆಗಳು ಪಾಲನೆಯಾಗಿಲ್ಲ‘ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಕೌಟುಂಬಿಕ ನ್ಯಾಯಾಲಯ ದಂಪತಿಗೆ ವಿಚ್ಛೇದನ ನೀಡಿ 2017ರ ಏಪ್ರಿಲ್‌ 28ರಂದು ಹೊರಡಿಸಿದ್ದ ಡಿಕ್ರಿ ಆದೇಶವನ್ನು ರದ್ದುಪಡಿಸಿರುವ ನ್ಯಾಯಪೀಠ, ಪ್ರಕರಣವನ್ನು ಪುನಃ ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ. ’ಉಭಯ ಪಕ್ಷಗಾರರಿಗೂ ಸೂಕ್ತ ಅವಕಾಶ ನೀಡಿ ಆರು ತಿಂಗಳ ಒಳಗೆ ಪ್ರಕರಣವನ್ನು ಕಾನೂನು ಪ್ರಕಾರ ನಿರ್ಧರಿಸಬೇಕು‘ ಎಂದು ಆದೇಶಿಸಿದೆ.

ದಂಪತಿ 2006ರಲ್ಲಿ ಇಸ್ಲಾಂ ಧರ್ಮದಂತೆ ಮದುವೆಯಾಗಿದ್ದರು. ’ಪತ್ನಿಗೆ ಅಕ್ರಮ ಸಂಬಂಧವಿದೆ‘ ಎಂದು ಆರೋಪಿಸಿದ್ದ ಪತಿ, ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.