ಶಿರಹಟ್ಟಿ (ಗದಗ): ತಾಲ್ಲೂಕಿನ ಮಾಗಡಿ ಗ್ರಾಮದ ರೈತ ರಘುರೆಡ್ಡಿ ಶತರಡ್ಡಿ ಐದು ಎಕರೆಯಲ್ಲಿ ಹನಿ ನೀರಾವರಿ ಅಳವಡಿಸಿ ಬೆಳೆದಿದ್ದ ಬಾಳೆಯನ್ನು ತಾವೇ ಗ್ರಾಹಕರಿಗೆ ಮಾರಾಟ ಮಾಡಿ ₹10 ಲಕ್ಷ ಗಳಿಸಿದ್ದಾರೆ.
ಇವರು ಕಳೆದ ವರ್ಷ ₹11 ಲಕ್ಷ ಆದಾಯ ಗಳಿಸಿದ್ದರು. ಈ ವರ್ಷ ಹೆಚ್ಚಿನ ನಿರೀಕ್ಷೆಯಲ್ಲಿದ್ದರು. ಆದರೆ, ಲಾಕ್‌ಡೌನ್ ತಣ್ಣೀರೆರಚಿತು. ಧೃತಿಗೆಡದ ರಘುರೆಡ್ಡಿ ಬಾಳೆಕಾಯಿಯನ್ನು ಹಣ್ಣು ಮಾಡಿ ಮಾರಾಟ ಮಾಡುತ್ತಿದ್ದಾರೆ.
ಸುತ್ತಲಿನ ಗ್ರಾಮಗಳಿಗೆ ಟ್ರಾಕ್ಟರ್‌ನಲ್ಲಿ ಕೊಂಡೊಯ್ದು ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಸಿಗುತ್ತಿದೆ. ಮೂವರಿಗೆ ತಾತ್ಕಾಲಿಕ ಉದ್ಯೋಗವನ್ನೂ ಒದಗಿಸಿದ್ದಾರೆ.
‘ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದರೆ, ಇದಕ್ಕಿಂತ ಕಡಿಮೆ ಆದಾಯ ಬರುತ್ತಿತ್ತು. ಈಗ ಅದಕ್ಕಿಂತಲೂ ಉತ್ತಮ ಆದಾಯ ಬಂದಿದೆ’ ಎಂದು ಪ್ರತಿಕ್ರಿಯಿಸುತ್ತಾರೆ ರಘುರೆಡ್ಡಿ.
ಬಾಳೆಕಾಯಿ ಹಣ್ಣು ಮಾಡಲು ತೋಟದಲ್ಲೇ ತಗಡಿನ ಶೆಡ್ ನಿರ್ಮಿಸಿದ್ದಾರೆ. ಗೊನೆಗಳನ್ನು ಕಟಾವು ಮಾಡಿ, ಚಿಪ್ಪುಗಳನ್ನು ಬೇರ್ಪಡಿಸಿ,
ಶುದ್ಧ ನೀರಿನಿಂದ ತೊಳೆದು, ಒಣಗಿಸಿದ ನಂತರ, ಬಾಳೆಎಲೆ, ತಾಡಪತ್ರಿ ಹೊದೆಸಿ ಹಣ್ಣಾಗಲುಇಡುತ್ತಾರೆ. ಎರಡು ದಿನಗಳ ನಂತರ ಕಾಯಿಗಳು ನೈಸರ್ಗಿಕವಾಗಿ ಹಣ್ಣಾಗಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.