ADVERTISEMENT

ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ ಹೇಳಿಕೆ ಖಂಡನೀಯ, ಕ್ಷಮೆ ಕೇಳಬೇಕು: ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2023, 9:12 IST
Last Updated 25 ಡಿಸೆಂಬರ್ 2023, 9:12 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ರೈತರ ಬಗ್ಗೆ ನೀಡಿರುವ ಹೇಳಿಕೆಯನ್ನು ಮಾಜಿ ಸಿಎಂ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಖಂಡಿಸಿದ್ದಾರೆ.

ಸಚಿವರ ಹೇಳಿಕೆ ಕುರಿತು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಅನ್ನದಾತನ ಕಷ್ಟ, ಸಂಕಷ್ಟಗಳ ಬಗ್ಗೆ ಅವಹೇಳನ ಮಾಡುವುದು ಖಂಡಿತಾ ಸರಿಯಲ್ಲ. ಸಚಿವರು ಇಂಥ ವಿಷಯಗಳ ಬಗ್ಗೆ ಬಹಳ ಎಚ್ಚರಿಕೆ, ಸೂಕ್ಷ್ಮತೆ, ಸಂಯಮದಿಂದ ಮಾತನಾಡಬೇಕು’ ಎಂದು ಹೇಳಿದ್ದಾರೆ.

‘ನಾನು ಕೃಷಿ ಸಾಲ ಮನ್ನಾ ಮಾಡುವ ಮುನ್ನ ರಾಜ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯಾಕಾಂಡ ನೆನಪು ಮಾಡಿಕೊಂಡರೆ ಈಗಲೂ ನನ್ನ ಮೈ ನಡುಗುತ್ತದೆ. ರೈತ ಕೇಳುತ್ತಿರುವುದು ತನ್ನ ಹಕ್ಕನ್ನಷ್ಟೇ, ಭಿಕ್ಷೆಯನ್ನಲ್ಲ. ಸಚಿವರು ಬೇಷರತ್ ಕ್ಷಮೆ ಕೇಳಬೇಕು, ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಎಚ್‌ಡಿಕೆ ಆಗ್ರಹಿಸಿದ್ದಾರೆ.

ADVERTISEMENT

ಶಿವಾನಂದ ಪಾಟೀಲ ಹೇಳಿದ್ದೇನು?

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗ್ರಾಮೀಣ ಕೃಷಿ ಸ್ವಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿದ್ದ ಸಚಿವರು, ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಹೇಳಿದ್ದರು. ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟು ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬಿತ್ತನೆ ಬೀಜ, ಗೊಬ್ಬರವನ್ನೂ ಕೊಟ್ಟಿದ್ದಾರೆ. ಇನ್ನೂ ರೈತರಿಗೆ ಒಂದು ಆಸೆ ಇದೆ... ಪದೇ ಪದೇ ಬರಗಾಲ ಬರಲಿ ಎಂಬುದು. ಕಾರಣ ಸಾಲ ಮನ್ನಾ ಆಗುತ್ತೆ ಎಂದು. ಈ ರೀತಿಯಾಗಿ ಬಯಸಬಾರದು ಎಂದು ಹೇಳಿದ್ದರು. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜೆಡಿಎಸ್‌ –ಬಿಜೆಪಿ ನಾಯಕರು ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.