ಬಾಗಲಕೋಟೆ: ದೇಶದ ತೈಲೋತ್ಪಾದನೆಯಲ್ಲಿ ರೈತರನ್ನು ಸಹಭಾಗಿಗಳಾಗಿಸಿಕೊಳ್ಳಲು 2025ರ ವೇಳೆಗೆ ಪೆಟ್ರೋಲ್ ಹಾಗೂ ಡೀಸೆಲ್‌ನಲ್ಲಿ ಇಥೆನಾಲ್ ಸೇರ್ಪಡೆ ಪ್ರಮಾಣವನ್ನು ಶೇ 20ಕ್ಕೆ ಹೆಚ್ಚಳಗೊಳಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಬಾದಾಮಿ ತಾಲ್ಲೂಕಿನ ಕೆರಕಲಮಟ್ಟಿಯಲ್ಲಿ ಭಾನುವಾರ ಸಚಿವ ಮುರುಗೇಶ ನಿರಾಣಿ ಮಾಲೀಕತ್ವದ ಎಂ.ಆರ್.ಎನ್ ಉದ್ಯಮ ಸಮೂಹದ ಸಾಯಿಪ್ರಿಯಾ ಮೂರನೇ ಘಟಕ ಹಾಗೂ ಬಾದಾಮಿ ಸಕ್ಕರೆ ಕಾರ್ಖಾನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಇಥೆನಾಲ್ ಮಿಶ್ರಣ ಪ್ರಮಾಣ ಶೇ 1.18ರಷ್ಟು ಇತ್ತು. ಅದೀಗ ಶೇ 10ಕ್ಕೆ ಹೆಚ್ಚಳಗೊಂಡಿದೆ. ಕಬ್ಬು ಸೇರಿದಂತೆ ಇತರೆ ಕೃಷಿ ತ್ಯಾಜ್ಯಗಳಿಂದ ಇಥೆನಾಲ್ ತಯಾರಿಕೆಗೆ ಅನುಮತಿ ನೀಡುವ ಜೊತೆಗೆ ಈ ಮೊದಲು ವಿಧಿಸುತ್ತಿದ್ದ ಶೇ 18ರಷ್ಟು ಜಿಎಸ್‌ಟಿಯನ್ನು ಶೇ 5ಕ್ಕೆ ಇಳಿಸಲಾಗಿದೆ. ಇದರಿಂದ ಕಚ್ಚಾ ತೈಲ ಆಮದು ಪ್ರಮಾಣ ಕಡಿಮೆ ಆಗಲಿದೆ. ವಿದೇಶಿ ವಿನಿಮಯದ ರೂಪದಲ್ಲಿ ಗಲ್ಫ್ ರಾಷ್ಟ್ರಗಳ ಖಜಾನೆ ಸೇರುತ್ತಿದ್ದ ದೇಶದ ಹಣ ಇನ್ನು ರೈತರ ಬ್ಯಾಂಕ್ ಖಾತೆಗಳಿಗೆ ಸೇರಲಿದೆ ಎಂದರು.
ದೇಶದಲ್ಲಿ ರೈತರ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ದೊರಕಿಸಿಕೊಟ್ಟು ಅವರ ಆದಾಯ ದುಪ್ಪಟ್ಟುಗೊಳಿಸಲು ಕೃಷಿ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬದಲಾವಣೆಗಳ ತರಲು ಹೊರಟಿದ್ದಾರೆ. ಕರ್ನಾಟಕದಲ್ಲಿ ಈ ಬದಲಾವಣೆಗಳ ಅಳವಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದರು.
ಮೊದಲೆಲ್ಲಾ ನಾವು (ಬಿಜೆಪಿ) ರೈತರ ಹಿತದ ಬಗ್ಗೆ ಮಾತಾಡಿದರೆ ಕಾಂಗ್ರೆಸ್‌ನವರು ನಗುತ್ತಿದ್ದರು. ಈಗ ರೈತರಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡುವ ಯಾವುದೇ ಕೆಲಸಕ್ಕೆ ವಕ್ರದೃಷ್ಟಿ ಬೀರುತ್ತಿದ್ದಾರೆ. ಕಾಂಗ್ರೆಸ್‌ನವರು ಅವರ ಅವಧಿಯಲ್ಲಿ ರೈತ ಸ್ನೇಹಿ ಇಥೆನಾಲ್ ನೀತಿ ಏಕೆ ಜಾರಿಗೊಳಿಸಲಿಲ್ಲ. ರೈತರ ಬ್ಯಾಂಕ್ ಖಾತೆಗೆ ₹6 ಸಾವಿರ ಹಾಕುವ ಪ್ರಧಾನಮಂತ್ರಿ ಕಿಸಾನ್‌ಸಮ್ಮಾನ್ ಏಕೆ ಜಾರಿಗೊಳಿಸಲಿಲ್ಲ. ಅವರ ಉತ್ಪನ್ನಗಳಿಗೆ ಬೆಂಬಲ ಬೆಲೆ ಕೊಡಲಿಲ್ಲವೇಕೆ? ಪ್ರಧಾನಮಂತ್ರಿ ಫಸಲ್ ಬಿಮಾದಂತಹ ಯೋಜನೆಗಳ ಜಾರಿಗೆ ತರಲಿಲ್ಲವೇಕೆ ಎಂದು ತರಾಟೆಗೆ ತೆಗೆದುಕೊಂಡರು.
2014, 2019ರ ಲೋಕಸಭಾ ಚುನಾವಣೆಯಿಂದ ಮೊದಲುಗೊಂಡು ಮೊನ್ನಿನ ಗ್ರಾಮ ಪಂಚಾಯ್ರಿ ಚುನಾವಣೆಯವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೋಳಿಗೆ ಭರ್ತಿಯಾಗುವಷ್ಟು ಮತಗಳನ್ನು ಹಾಕಿದ ಕರ್ನಾಟಕದ ಜನತೆಗೆ ಅಭಾರಿಯಾಗಿದ್ದೇನೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ, ಆರ್.ಶಂಕರ್, ಶಶಿಕಲಾ ಜೊಲ್ಲೆ, ಸಂಸದರಾದ ಪಿ.ಸಿ.ಗದ್ದಿಗೌಡರ, ರಮೇಶ ಜಿಗಜಿಣಗಿ, ಜಿ.ಎಂ.ಸಿದ್ದೇಶ್ವರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.