ಮಂಡ್ಯ: ತಮಿಳುನಾಡಿಗೆ ಜುಲೈ 31ರವರೆಗೆ ಪ್ರತಿದಿನ 1 ಟಿಎಂಸಿ ಅಡಿ (11,500 ಕ್ಯುಸೆಕ್) ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿರುವ ಆದೇಶ ಖಂಡಿಸಿ ನಗರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮತ್ತು ರೈತಪರ ಹೋರಾಟಗಾರರು ಶುಕ್ರವಾರ ಬೀದಿಗಿಳಿದು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ನಗರದ ಜೆ.ಸಿ. ವೃತ್ತದಲ್ಲಿ ಒಗ್ಗೂಡಿದ ಜಿಲ್ಲಾ ರೈತಹಿತರಕ್ಷಣಾ ಸಮಿತಿ, ರೈತ ಸಂಘ (ಮೂಲ ಸಂಘಟನೆ), ಕನ್ನಡಸೇನೆ, ಜಯಕರ್ನಾಟಕ ಪರಿಷತ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಬೆಂಗಳೂರು– ಮೈಸೂರು ಹೆದ್ದಾರಿಯನ್ನು ಬಂದ್ ಮಾಡಿ, ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿ ಧರಣಿ ನಡೆಸಿದರು.
ಕಾವೇರಿ ನೀರು ನಿಯಂತ್ರಣ ಸಮಿತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಸಮಿತಿಯು ಪ್ರತಿಬಾರಿಯೂ ಕರ್ನಾಟಕದ ವಿರುದ್ಧವೇ ನೀರು ಬಿಡುವ ಆದೇಶ ಹೊರಡಿಸುತ್ತಿದೆ. ರಾಜ್ಯ ಸರ್ಕಾರ ತನ್ನ ಅಧಿಕಾರ ಉಳಿಸಿಕೊಳ್ಳಲು ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಸರ್ಕಾರ ಆದೇಶ ಪಾಲಿಸಬಾರದು
ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ‘ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ಈ ಆದೇಶ ಪಾಲಿಸಬಾರದು. ಹೀಗಿರುವ ಸದ್ಯದ ಪರಿಸ್ಥಿತಿಯಲ್ಲಿ ಹಾಲಿ ಇರುವ ಅಣೆಕಟ್ಟೆಯ ನೀರು (ಪ್ರಸ್ತುತ 27.37 ಟಿಎಂಸಿ ಅಡಿ) ಕುಡಿಯುವ ನೀರಿಗೂ ಸಾಲುವುದಿಲ್ಲ. ಹಾಗಾಗಿ ಈ ಆದೇಶ ಸಲ್ಲದು. ತಮಿಳುನಾಡಿಗೆ ನೀರು ಬಿಡುವ ಆದೇಶ ವಾಸ್ತವಕ್ಕೆ ದೂರವಾದುದು. ಗಂಭೀರವಾಗಿ ಸದನದಲ್ಲಿ ಚರ್ಚೆ ನಡೆಸಬೇಕು. ಈ ಆದೇಶವನ್ನು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಆಗ್ರಹಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಮಾಡಿರುವುದು ಅವೈಜ್ಞಾನಿಕವಾಗಿದೆ, ಬರಗಾಲದ ಹಿನ್ನೆಲೆಯಲ್ಲಿ ರೈತರು ಬೇಸಿಗೆ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಈಗಲೂ ಬೆಳೆ ಬೆಳೆಯುವ ಪರಿಸ್ಥಿತಿಯಲ್ಲಿ ಇಲ್ಲ. ಜಲಾಶಯಗಳು ಭರ್ತಿಯಾಗಿಲ್ಲ. ಆದರೂ ಸಹ ನೀರು ಹರಿಸಿ ಎಂದು ಆದೇಶ ಮಾಡಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಇಂತಹ ರೈತ ವಿರೋಧಿ ಆದೇಶವನ್ನು ಒಪ್ಪಬಾರದು ಎಂದು ಒತ್ತಾಯಿಸಿದರು.
ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್ ಮಾತನಾಡಿ, ತಮಿಳುನಾಡಿಗೆ ನೀರು ಹರಿಸಿ ಎಂದು ಆದೇಶ ಮಾಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕದ ಕಾವೇರಿ ಕೊಳ್ಳ ಪ್ರದೇಶದ ವಾಸ್ತವ ಪರಿಸ್ಥಿತಿಯನ್ನು ಅರಿತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಯ ಮುಖಂಡರಾದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಶಿವಳ್ಳಿ ಚಂದ್ರಶೇಖರ್, ಮಲ್ಲನಾಯಕನ ಕಟ್ಟೆ ವಿಜಯ್‌ಕುಮಾರ್, ಪಿ.ಜಿ.ನಾಗೇಂದ್ರ, ಸತ್ಯಭಾಮ, ಸೌಭಾಗ್ಯ, ಬೆಟ್ಟಹಳ್ಳಿ ಮಂಜುನಾಥ್, ಗೌರಮ್ಮ, ಕಮಲಮ್ಮ, ಸಿ.ಟಿ.ಮಂಜುನಾಥ್, ಎಂ.ಎಲ್.ತುಳಸೀದರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.