ಮಂಡ್ಯ: ‘ಜಿಲ್ಲೆಯ ಜೀವನಾಡಿಯಾಗಿರುವ ಮೈಷುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು. ಒಂದು ಸರ್ಕಾರ ಕಾರ್ಖಾನೆಯನ್ನು ಮಾರಾಟ ಮಾಡಿದರೆ, ಖಾಸಗೀಕರಣಗೊಳಿಸಿದರೆ ರೈತರು ದಂಗೆ ಏಳುತ್ತಾರೆ’ ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಗುರುವಾರ ಎಚ್ಚರಿಸಿದರು.
‘ಇಡೀ ದೇಶದಲ್ಲಿ ಯಾವ ಜಾಗವನ್ನೂ ಸಕ್ಕರೆ ನಾಡು ಎಂದು ಕರೆಯುವುದಿಲ್ಲ. ಆದರೆ ಮೈಷುಗರ್ ಕಾರ್ಖಾನೆಯಿಂದಾಗಿ ಮಂಡ್ಯವನ್ನು ಸಕ್ಕರೆ ಜಿಲ್ಲೆ ಎಂದು ಕರೆಯುತ್ತಾರೆ. ಸರ್ಕಾರ ಶೀಘ್ರ ಕಬ್ಬು ಅರೆಯುವ ಪ್ರಕ್ರಿಯೆ ಆರಂಭಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ ‘ವಿವಿಧ ಸರ್ಕಾರಗಳ ಅವಧಿಯಲ್ಲಿ ಮೈಷುಗರ್ ಕಾರ್ಖಾನೆಯಲ್ಲಿ ₹ 504 ಕೋಟಿ ಅವ್ಯವಹಾರ ನಡೆದಿದೆ. ಈ ಕುರಿತು ಶೀಘ್ರ ದಾಖಲೆ ಬಿಡುಗಡೆ ಮಾಡಲಾಗುವುದು. ಭ್ರಷ್ಟಾಚಾರ ಮುಚ್ಚಿಟ್ಟುಕೊಳ್ಳಲು ಸರ್ಕಾರ ಖಾಸಗೀಕರಣ, ಕಾರ್ಯಾಚರಣೆ ಮತ್ತು ನಿರ್ವಹಣೆ (ಒ ಅಂಡ್ ಎಂ) ಎಂಬ ನೆಪ ಹೇಳುತ್ತಿದೆ. ಸರ್ಕಾರದ ನಡೆ ವಿರುದ್ಧ ಜೂನ್ 15 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.