ಬೆಂಗಳೂರು: ವಿದ್ಯುತ್ ಸರಬರಾಜನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ, ರೈತರ ಪಹಣಿಗಳಲ್ಲಿ ವಕ್ಫ್ ಹೆಸರನ್ನು ಕೂಡಲೇ ತೆಗೆದು ಹಾಕಬೇಕು ಎಂದು ಒತ್ತಾಯಿಸಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಡಿಸೆಂಬರ್ 13ರಂದು ಮುತ್ತಿಗೆ ಹಾಕಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.
ನಗರದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದರು.
‘ಬೆಂಗಳೂರಿನಲ್ಲಿ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವವರಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಇದನ್ನು ಖಾಸಗಿಯವರು ನಿರ್ವಹಿಸುತ್ತಾರೆ. ಅಲ್ಲದೆ, ರೈತರು ಪಂಪ್‌ಸೆಟ್‌ಗಳಿಗೆ ಸೌರಶಕ್ತಿ ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ವಿದ್ಯುತ್ ಗ್ರಿಡ್ ಸಂಪರ್ಕದಿಂದ ರೈತರನ್ನು ಹೊರಗಿಟ್ಟರೆ ಖಾಸಗೀಕರಣ ಸುಲಭವಾಗುತ್ತದೆ ಎಂಬ ಹುನ್ನಾರ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ’ ಎಂದು ಆರೋಪಿಸಿದರು.
‘ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಸುಮ್ಮನಿರುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತಿದೆ’ ಎಂದು ತಿಳಿಸಿದರು.
ಸಂಘದ ಕಾರ್ಯಾಧ್ಯಕ್ಷ ಮಂಜುನಾಥ ಗೌಡ ಸೊರಬ, ಪದಾಧಿಕಾರಿಗಳಾದ ಭಕ್ತರಹಳ್ಳಿ ಬೈರೇಗೌಡ, ಭೀಮ್‌ಸೇನ್ ಗಡಾದಿ, ವೀರಭದ್ರಸ್ವಾಮಿ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.