ADVERTISEMENT

ಐಕೆಎಫ್‌ ಬದಲಾವಣೆಗೆ ಮುಂದಾದ ಸರ್ಕಾರ: ‘ಬಂಡವಾಳ’ಕ್ಕಾಗಿ ₹90 ಲಕ್ಷದ ಹುದ್ದೆ!

ಇನ್ವೆಸ್ಟ್ ಕರ್ನಾಟಕ ಫೋರಂ ಸ್ವರೂಪ ಬದಲಾವಣೆಗೆ ಮುಂದಾದ ಸರ್ಕಾರ

ಭರತ್ ಜೋಶಿ
Published 5 ಅಕ್ಟೋಬರ್ 2024, 23:30 IST
Last Updated 5 ಅಕ್ಟೋಬರ್ 2024, 23:30 IST
   

ಬೆಂಗಳೂರು: ‘ಇನ್ವೆಸ್ಟ್‌ ಕರ್ನಾಟಕ ಫೋರಂ’ಗೆ (ಐಕೆಎಫ್‌) ಆಮೂಲಾಗ್ರ ಬದಲಾವಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರವು, ವಾರ್ಷಿಕ ₹90 ಲಕ್ಷ ವೇತನದ ಹುದ್ದೆಗಳನ್ನು ಸೃಷ್ಟಿಸಲು ಕ್ರಮ ತೆಗೆದುಕೊಂಡಿದೆ. 

ರಾಜ್ಯದಲ್ಲಿ ಬಂಡವಾಳ ಆಕರ್ಷಣೆ ಮತ್ತು ಹೂಡಿಕೆಗೆ ನೆರೆಯ ರಾಜ್ಯಗಳಿಂದ ಪೈಪೋಟಿ ಹೆಚ್ಚಿದ ಬೆನ್ನಲ್ಲೇ ಐಕೆಎಫ್‌ಗೆ ಆ ಕ್ಷೇತ್ರದ ತಜ್ಞ–ವೃತ್ತಿಪರರ ನೇಮಕಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿದೆ. 

ಪುನರ್‌ರಚನೆಯಾಗುವ ಐಕೆಎಫ್‌ಗೆ ಐಎಎಸ್‌ ಆಧಿಕಾರಿಯೊಬ್ಬರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ನೇಮಕ ಮಾಡಲಾಗುತ್ತದೆ. ಮುಖ್ಯ ನಿರ್ವಹಣಾ ಅಧಿಕಾರಿಯನ್ನಾಗಿ (ಸಿಒಒ) ಉದ್ಯಮ ವಲಯದ ತಜ್ಞರನ್ನು ನೇಮಕ ಮಾಡಲಾಗುತ್ತದೆ. ಸಿಒಒ ಹುದ್ದೆಗೆ ವಾರ್ಷಿಕ ₹70 ಲಕ್ಷದಿಂದ ₹90 ಲಕ್ಷದವರೆಗೆ ವೇತನ ನೀಡಲು ಸರ್ಕಾರ ಸಿದ್ದವಿದೆ.

ADVERTISEMENT

ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಸಿದ್ಧಪಡಿಸಿರುವ ಟಿಪ್ಪಣಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಐಕೆಎಫ್‌ ಪೂರ್ಣ ಪ್ರಮಾಣದ ಸಂಘಟನೆಯಾಗಿ ಇರಬೇಕಿತ್ತು. ಆದರೆ, ಅದಕ್ಕೆ ಪ್ರತ್ಯೇಕ ತಂಡವೇ ಇಲ್ಲ. ಬಂಡವಾಳ ಆಕರ್ಷಣೆ, ಹೂಡಿಕೆ ಉತ್ತೇಜನದಲ್ಲಿ ಆ ಸಂಸ್ಥೆಗೆ ಯಾವುದೇ ಸ್ಪಷ್ಟತೆ ಇದ್ದಂತಿಲ್ಲ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯವಾದ ಉತ್ತೇಜನಾ ಕಾರ್ಯಕ್ರಮಗಳನ್ನು ಸ್ವತಃ ತಾನೇ ನಿರ್ವಹಿಸುವಷ್ಟು ಸಂಸ್ಥೆಯು ಸ್ವತಂತ್ರವಾಗಿರಬೇಕು’ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

ಜಾಗತಿಕ ಮಟ್ಟದ ಹೂಡಿಕೆ ಉತ್ತೇಜನ. ಸಂಸ್ಥೆಗಳನ್ನು ಮಾದರಿಯಾಗಿ ಇರಿಸಿಕೊಂಡು ಐಕೆಎಫ್‌ನಲ್ಲಿ ಬದಲಾವಣೆ ತರಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಜಾಗತಿಕ ಮಟ್ಟದಲ್ಲಿ ಇನ್ವೆಸ್ಟ್ ಇಂಡಿಯಾ, ಇನ್ವೆಸ್ಟ್‌ ಚಿಲಿ, ಸಿಂಗಪುರ ಎಕನಾಮಿಕ್‌ ಡೆವಲಪ್‌ಮೆಂಟ್‌ ಬೋರ್ಡ್‌ ಮತ್ತು ಇನ್ವೆಸ್ಟ್‌ ಸೌತ್ ಆಫ್ರಿಕಾ ಪ್ರಮುಖ ಹೂಡಿಕೆ ಉತ್ತೇಜನ ಸಂಸ್ಥೆಗಳಾಗಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ‘ಗೈಡೆನ್ಸ್‌’ ಇಂಥದ್ದೇ ಸ್ವರೂಪದ ಸಂಸ್ಥೆ. ಈ ಎಲ್ಲವನ್ನೂ ಮಾದರಿಯಾಗಿ ಇರಿಸಿಕೊಂಡು ಐಕೆಎಫ್‌ನಲ್ಲಿ ಬದಲಾವಣೆ ತರಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಹತ್ತಾರು ಲಕ್ಷದ ಪ್ಯಾಕೇಜ್‌
ಮೊದಲ ಹಂತದಲ್ಲಿ ಹೂಡಿಕೆ ಉತ್ತೇಜನ ಮುಖ್ಯಸ್ಥ ಹುದ್ದೆ, ಸೆಮಿಕಂಡಕ್ಟರ್‌,ಇ–ಮೊಬಿಲಿಟಿ ಮತ್ತು ಆಟೊಮೊಬೈಲ್‌, ತಯಾರಿಕಾ ವಲಯ, ಗ್ರಾಹಕ ಸರಕುಗಳು–ಆರೋಗ್ಯ ಸೇವಾ ವಲಯಗಳಿಂದ ಬಂಡವಾಳ ಆಕರ್ಷಿಸುವ ಹೊಣೆಗಾರಿಕೆಯ ನಾಲ್ಕು ಹುದ್ದೆಗಳು ಹಾಗೂ ಮಾರುಕಟ್ಟೆ ವಿಶ್ಲೇಷಕ ಸೇರಿ ಆರು ಹುದ್ದೆಗಳ ಸೃಷ್ಟಿಗೆ ಹಣಕಾಸು ಇಲಾಖೆಯ ಅನುಮೋದನೆ ದೊರೆತಿದೆ ಎಂದು ಗೊತ್ತಾಗಿದೆ. ಹೂಡಿಕೆ ಉತ್ತೇಜನ ಮುಖ್ಯಸ್ಥ ಹುದ್ದೆಗೆ ₹35 ಲಕ್ಷದಿಂದ ₹45 ಲಕ್ಷ, ನಾಲ್ಕು ಪ್ರಮುಖ ಉದ್ಯಮ ವಲಯಗಳ ಕಾರ್ಯನಿರ್ವಾಹಕರ ಹುದ್ದೆಗಳಿಗೆ ತಲಾ ₹30 ಲಕ್ಷದಿಂದ ₹40 ಲಕ್ಷ ಮತ್ತು ಮಾರುಕಟ್ಟೆ ವಿಶ್ಲೇಷಕ ಹುದ್ದೆಗೆ ₹20 ಲಕ್ಷದಿಂದ ₹25 ಲಕ್ಷದವರೆಗೆ ವಾರ್ಷಿಕ ವೇತನ ನಿಗದಿಪಡಿಸಲು ಇಲಾಖೆ ಒಪ್ಪಿದೆ ಎನ್ನಲಾಗಿದೆ. ಸಿಒಒ ಮತ್ತು ಇತರ ಹುದ್ದೆಗಳ ನೇಮಕಾತಿ ಎರಡು ಮತ್ತು ಮೂರನೇ ಹಂತದಲ್ಲಿ ನೇಮಕಾತಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.