ಬೆಂಗಳೂರು: ಹಸಿರು ಕ್ರಾಂತಿಯ ಹರಿಕಾರ ಎಂದೇ ಖ್ಯಾತರಾಗಿದ್ದ ಎಂ.ಎಸ್.ಸ್ವಾಮಿನಾಥನ್ (98) ಅವರು ಚೆನ್ನೈನಲ್ಲಿ ಗುರುವಾರ ನಿಧನರಾಗಿದ್ದಾರೆ.
ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು 1925ರ ಆಗಸ್ಟ್ 7ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ್ದರು.
ಹವಾಮಾನ ತಜ್ಞ, ಕೃಷಿ ವಿಜ್ಞಾನಿ, ಸಸ್ಯ ತಳಿವಿಜ್ಞಾನಿಯೂ ಆಗಿದ್ದ ಸ್ವಾಮಿನಾಥನ್ ಅವರಿಗೆ 1971ರಲ್ಲಿ ರೇಮನ್ ಮ್ಯಾಗ್ಸೆಸೆ, 1986ರಲ್ಲಿ ಆಲ್ಬರ್ಟ್ ಐನ್‌ಸ್ಟೀನ್ ವಿಶ್ವ ವಿಜ್ಞಾನ ಪ್ರಶಸ್ತಿ, ಪದ್ಮ ಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಸ್ವಾಮಿನಾಥನ್ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರು, 'ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ನಿಧನದಿಂದ ತೀವ್ರ ದುಃಖವಾಗಿದೆ. ಆಹಾರ ಭದ್ರತೆ ಸಾಧನೆಗಾಗಿ ಇನ್ನಿಲ್ಲದಂತೆ ಶ್ರಮಿಸಿದ ದೂರದೃಷ್ಟಿಯುಳ್ಳ ಅವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯುತ್ತಿದ್ದದ್ದು ಸೂಕ್ತವಾಗಿದೆ. ಅವರು ಬಿಟ್ಟುಹೋಗಿರುವ ಶ್ರೀಮಂತ ಕೃಷಿ ವಿಜ್ಞಾನ ಪರಂಪರೆಯು ಮನುಕುಲವನ್ನು ಸುರಕ್ಷಿತ ಮತ್ತು ಹಸಿವು ಮುಕ್ತ ಭವಿಷ್ಯದತ್ತ ಮುನ್ನಡೆಸಲು ಮಾರ್ಗದರ್ಶಿಯಾಗಲಿದೆ' ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸ್ಮರಿಸಿದ್ದಾರೆ.
'ಡಾ. ಸ್ವಾಮಿನಾಥನ್ ಅವರೊಂದಿಗಿನ ಸಂಭಾಷಣೆಯನ್ನು ಸದಾ ಗೌರವಿಸುತ್ತೇನೆ. ಭಾರತದ ಪ್ರಗತಿಯನ್ನು ಕಾಣಲು ಅವರು ಹೊಂದಿದ್ದ ಉತ್ಸಾಹ ಸದಾ ಮಾದರಿಯಾದದ್ದು. ಅವರ ಬದುಕು ಮತ್ತು ಸಾಧನೆ ಭವಿಷ್ಯದ ಪೀಳಿಗೆಗೆ ಉತ್ತೇಜನ ನೀಡಲಿವೆ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಖ್ಯಾತ ಕೃಷಿ ವಿಜ್ಞಾನಿ, ಹಸಿರು ಕ್ರಾಂತಿಯ ಹರಿಕಾರರಾದ ಎಂ.ಎಸ್ ಸ್ವಾಮಿನಾಥನ್ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಸುಸ್ಥಿರ ಕೃಷಿ ಉತ್ಪನ್ನಗಳ ಉತ್ಪಾದಕತೆಗೆ ಸ್ವಾಮಿನಾಥನ್ ಅವರು ನೀಡಿದ ಕೊಡುಗೆಗಳ ಫಲವಾಗಿ ಭಾರತವು ಕೃಷಿ ಉತ್ಪಾದಕತೆಯಲ್ಲಿ ಸ್ವಾವಲಂಬನೆ ಸಾಧಿಸಿ, ಜಾಗತಿಕ ಮನ್ನಣೆ ಗಳಿಸಲು ಸಾಧ್ಯವಾಯಿತು. ವಿಶ್ವಸಂಸ್ಥೆಯಿಂದ ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ ಎಂದು ಕರೆಯಲ್ಪಟ್ಟ ಹಿರಿಯ ಸಸ್ಯ ತಳಿ ಶಾಸ್ತ್ರಜ್ಞ ಸ್ವಾಮಿನಾಥನ್ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬವರ್ಗ ಮತ್ತು ಬಂಧು ಮಿತ್ರರಿಗೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.