ಬೆಂಗಳೂರು: ಭ್ರೂಣ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಯಾದ ಶುಶ್ರೂಷಕಿ ಮಂಜುಳಾ ಅವರನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಮೈಸೂರಿನಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
‘ಆರೋಪಿ ಮಂಜುಳಾ, ಪ್ರಮುಖ ಆರೋಪಿ ಡಾ. ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮಂಜುಳಾ ಅವರನ್ನು ಮೈಸೂರಿನ ಆಸ್ಪತ್ರೆಯಲ್ಲಿ ಶನಿವಾರ ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 10ಕ್ಕೆ ಏರಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಜಾಲ ಸಕ್ರಿಯವಾಗಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಇದುವರೆಗೂ 900ಕ್ಕೂ ಹೆಚ್ಚು ಭ್ರೂಣಗಳನ್ನು ಹತ್ಯೆ ಮಾಡಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ’ ಎಂದು ಮೂಲಗಳು ತಿಳಿಸಿವೆ.
‘ಡಾ. ಚಂದನ್ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣ ಹತ್ಯೆ ಮಾಡುತ್ತಿದ್ದ. ಶುಶ್ರೂಷಕಿ ಮಂಜುಳಾ ಸಹಕಾರ ನೀಡುತ್ತಿದ್ದರು. ಮಂಜುಳಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು’ ಎಂದು ಹೇಳಿವೆ.
ಕಡತಗಳ ಹಸ್ತಾಂತರ: ಭ್ರೂಣ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಪ್ರಕರಣದ ಕಡತಗಳನ್ನು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ.
ಕಡತಗಳನ್ನು ಪರಿಶೀಲನೆ ನಡೆಸಲಿರುವ ಸಿಐಡಿ ಅಧಿಕಾರಿಗಳು, ಬಾಡಿ ವಾರಂಟ್ ಮೂಲಕ ಆರೋಪಿಗಳನ್ನು ಕಸ್ಟಡಿಗೆ ಪಡೆದು ಪುನಃ ವಿಚಾರಣೆ ನಡೆಸುವ ಸಾಧ್ಯತೆ ಇದೆ.
‘ದಿನಕ್ಕೆ 60 ಹತ್ಯೆ: ಕಾವೇರಿ ನದಿಗೆ ಭ್ರೂಣ’ ‘ಆರೋಪಿ ಮಂಜುಳಾ ವೈದ್ಯರ ಸಹಾಯಕಿ ಆಗಿದ್ದರು. ಗರ್ಭಿಣಿಯರ ನೋಂದಣಿ ಹೆಚ್ಚಿರುತ್ತಿದ್ದ ಸಂದರ್ಭದಲ್ಲಿ ದಿನಕ್ಕೆ 60 ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡುತ್ತಿದ್ದ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ. ಜೊತೆಗೆ ಭ್ರೂಣಗಳನ್ನು ಕಾವೇರಿ ನದಿಗೆ ಎಸೆದಿರುವ ಬಗ್ಗೆಯೂ ಅವರು ತಿಳಿಸಿದ್ದಾರೆ. ಈ ಸಂಗತಿ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಗರ್ಭಿಣಿಯರು ಸ್ವಯಂಪ್ರೇರಣೆಯಿಂದ ಹೆಣ್ಣು ಭ್ರೂಣ ತೆಗೆಸುತ್ತಿದ್ದ ಮಾಹಿತಿಯೂ ಮಂಜುಳಾ ವಿಚಾರಣೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.