ಬೆಂಗಳೂರು: ಉತ್ತರಾಖಂಡದ ಸಹಸ್ತ್ರ ತಾಲ್ ಚಾರಣಕ್ಕೆ ತೆರಳಿದ್ದ ರಾಜ್ಯದ 22 ಜನರ ಪೈಕಿ 13 ಜನರನ್ನು ರಕ್ಷಿಸಲಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ.
ಅಪಾಯಕ್ಕೆ ಸಿಲುಕಿದ್ದ ಚಾರಣಿಗರ ಪೈಕಿ ಐವರು ಬುಧವಾರ ಮೃತಪಟ್ಟಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ ಎಂದು ನಿನ್ನೆ ಹೇಳಲಾಗಿತ್ತು. ಇದೀಗ ಕಣ್ಮರೆಯಾಗಿದ್ದವರ ಶವಗಳು ಪತ್ತೆಯಾಗಿವೆ.
ರಾಜ್ಯದ ಚಾರಣಿಗರು ಅಪಾಯದಲ್ಲಿ ಸಿಲುಕಿರುವ ಮಾಹಿತಿ ಸಿಗುತ್ತಿದ್ದಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಡೆಹ್ರಾಡೂನ್‌ಗೆ ತೆರಳಿದ್ದಾರೆ. ರಕ್ಷಿಸಲಾಗಿರುವ ಚಾರಣಿಗರನ್ನು ಅವರು ಭೇಟಿಯಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಹವಾಮಾನ ವೈಪರೀತ್ಯದಿಂದಾಗಿ ಅಡ್ಡಿಯಾಗಿತ್ತು. ಬುಧವಾರ ಬೆಳಿಗ್ಗೆ 5ಕ್ಕೆ ಆರಂಭವಾದ ಕಾರ್ಯಾಚರಣೆ ಮಧ್ಯಾಹ್ನ ನಿಲ್ಲಿಸಲಾಗಿತ್ತು.
ಹವಾಮಾನ ಪರಿಸ್ಥಿತಿಯು ರಕ್ಷಣಾ ಸಿಬ್ಬಂದಿಗೆ ಸವಾಲಾಯಿತು. ಇಂದು ಮತ್ತೆ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ರಾಜ್ಯಕ್ಕೆ ತರಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, 36 ರಿಂದ 72 ವರ್ಷದವರು ಚಾರಣಿಗರ ಗುಂಪಿನಲ್ಲಿದ್ದರು. ಅತ್ಯಂತ ಹಿರಿಯ (72 ವರ್ಷದ) ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ.
ಚಾರಣಿಗರಾದ ಸೌಮ್ಯಾ ಕನಲೆ, ಸ್ಮೃತಿ ಡೊಲಸ್, ಶೀನಾ ಲಕ್ಷ್ಮಿ, ಎಸ್.ಶಿವಜ್ಯೋತಿ, ಅನಿಲ್ ಭಟ್ಟ, ಭರತ್ ಬೊಮ್ಮನಗೌಡರ್, ಮಧು ಕಿರಣ್ ರೆಡ್ಡಿ, ಬಿ.ಎಸ್. ಜಯಪ್ರಕಾಶ್, ಎಸ್. ಸುಧಾಕರ್, ಎಂ.ಕೆ. ವಿನಯ್, ವಿವೇಕ್ ಶ್ರೀಧರ್, ಎ. ನವೀನ್ ಹಾಗೂ ರಿತಿಕಾ ಜಿಂದಾಲ್ ಬದುಕುಳಿದವರು.
ಮೃತರನ್ನು, ಆಶಾ ಸುಧಾಕರ್, ಪದ್ಮನಾಭ ಕುಂದಾಪುರ ಕೃಷ್ಣಮೂರ್ತಿ, ಸಿಂಧೂ ವಕೇಕಲಂ, ಕೆ.ಎನ್. ವೆಂಕಟೇಶ ಪ್ರಸಾದ್, ಅನಿತಾ ಬಂಗಪ್ಪ, ಪದ್ಮಿನಿ ಹೆಗ್ಡೆ, ಚೈತ್ರಾ ಪ್ರಣೀತ್, ವಿನಾಯಕ್ ಮುಂಗುರ್ವಾಡಿ ಮತ್ತು ಸುಜಾಥಾ ಮುಂಗುರ್ವಾಡಿ ಎಂದು ಗುರುತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.