ಬೆಂಗಳೂರು: ‘ಹಿಂದುಳಿದ ವರ್ಗಗಳ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ಮತ್ತು ಜೆಡಿಎಸ್ ಯತ್ನಿಸುತ್ತಿವೆ. ಈ ಕಾರಣದಿಂದಲೇ ಪಾದಯಾತ್ರೆ ಹಮ್ಮಿಕೊಂಡಿವೆ. ಈ ದ್ವೇಷಪೂರಿತ ಹೋರಾಟವನ್ನು ನಿಲ್ಲಿಸದೇ ಇದ್ದರೆ, ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ ಎಚ್ಚರಿಕೆ ನೀಡಿದರು.
ನಗರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದುಳಿದ ವರ್ಗದ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂಬುದನ್ನು ಇವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ ಮತ್ತು ಮುಡಾ ನಿವೇಶನ ಹಂಚಿಕೆ ಪ್ರಕರಣಗಳಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ. ಹೀಗಿದ್ದೂ ವಿರೋಧ ಪಕ್ಷಗಳು ಸಿದ್ದರಾಮಯ್ಯ ವಿರುದ್ಧ ಸಂಚು ನಡೆಸುತ್ತಿವೆ. ಇದನ್ನು ಧಿಕ್ಕರಿಸುತ್ತೇವೆ’ ಎಂದರು.
‘ನೆರೆ ಹಾವಳಿಯಿಂದ ರಾಜ್ಯದ ಹಲವು ಪ್ರದೇಶಗಳು ತತ್ತರಿಸಿವೆ. ಡೆಂಗಿ ಪ್ರಕರಣಗಳು ಹೆಚ್ಚಾಗಿವೆ. ವಿಧಾನಮಂಡಲ ಅಧಿವೇಶನದಲ್ಲಿ ಜನಕ್ಕೆ ಉಪಯೋಗವಾಗುವ ವಿಷಯಗಳನ್ನು ಬಿಟ್ಟು, ಎರಡೂ ಸದನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಮತ್ತು ಪರಿಷತ್ ಸದಸ್ಯರು ಗದ್ದಲ ಎಬ್ಬಿಸಿದರು. ಅಭಿವೃದ್ಧಿಗೆ ಸಹಕಾರ ನೀಡುವ ಬದಲಿಗೆ ಹಾದಿ–ಬೀದಿ ಹೋರಾಟ ನಡೆಸುತ್ತಿದ್ದಾರೆ. ಇಂಥದ್ದನ್ನು ಬಿಟ್ಟು ಜನರಿಗೆ ಉಪಯೋಗವಾಗುವ ಕೆಲಸವನ್ನು ಮಾಡಬೇಕು’ ಎಂದು ಸಂಘದ ಕಾರ್ಯಾಧ್ಯಕ್ಷ ಬಸವರಾಜ ಲ. ಬಸಲಿಗುಂದಿ ಆಗ್ರಹಿಸಿದರು.
‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ತಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ಅವರ ಸಹಿ ನಕಲು ಮಾಡಿದ ಆರೋಪ ಎದುರಿಸಿದ್ದರು. ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿದ್ದರು. 40 ವರ್ಷಗಳಿಂದ ರಾಜಕಾರಣದಲ್ಲಿದ್ದು, ಒಂದೂ ಕಪ್ಪುಚುಕ್ಕೆಯಿಲ್ಲದ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಯಾವ ನೈತಿಕತೆಯೂ ಇವರಿಗೆ ಇಲ್ಲ. ಇನ್ನು ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತದ ಅವಧಿಯಲ್ಲಿ ಏನೇನು ಆಗಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ರಾಜ್ಯ ಸರ್ಕಾರದ ತನಿಖೆಯಿಂದ ಇವೆಲ್ಲವೂ ಹೊರಬರಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.