ADVERTISEMENT

ಭೂಮಿ ನೀಡದಿದ್ದರೆ ಉಗ್ರ ಹೋರಾಟ: ಡಿ.ಎಚ್‌.ಪೂಜಾರ್‌

ಭೂಮಿ ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶದಲ್ಲಿ ಸರ್ಕಾರಕ್ಕೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:45 IST
Last Updated 5 ಅಕ್ಟೋಬರ್ 2024, 15:45 IST
<div class="paragraphs"><p>ಭೂಮಿ ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶದಲ್ಲಿ ಗುಜರಾತ್‌ನ ವಡಗಾಂ ಶಾಸಕ ಜಿಗ್ನೇಶ್ ಮೆವಾನಿ&nbsp; ಮತ್ತು ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯ ನೂರ್‌ ಶ್ರೀಧರ್ ಚರ್ಚೆಯಲ್ಲಿ ತೊಡಗಿದ್ದರು. ಹೋರಾಟ ಸಮಿತಿಯ ಬೆಂಬಲಿಗರಾದ ಎನ್.ವೆಂಕಟೇಶ್, ಡಾ.ವಿಜಯಾ ಪಾಲ್ಗೊಂಡಿದ್ದರು </p></div>

ಭೂಮಿ ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶದಲ್ಲಿ ಗುಜರಾತ್‌ನ ವಡಗಾಂ ಶಾಸಕ ಜಿಗ್ನೇಶ್ ಮೆವಾನಿ  ಮತ್ತು ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯ ನೂರ್‌ ಶ್ರೀಧರ್ ಚರ್ಚೆಯಲ್ಲಿ ತೊಡಗಿದ್ದರು. ಹೋರಾಟ ಸಮಿತಿಯ ಬೆಂಬಲಿಗರಾದ ಎನ್.ವೆಂಕಟೇಶ್, ಡಾ.ವಿಜಯಾ ಪಾಲ್ಗೊಂಡಿದ್ದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ವಂಚಿತರಿಗೆ ಭೂಮಿ, ವಸತಿ ನ್ನು ಕಲ್ಪಿಸಲು ಕಾಂಗ್ರೆಸ್ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ, ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಡಿ.ಎಚ್‌.ಪೂಜಾರ್‌ ಶನಿವಾರ ಹೇಳಿದರು.

ADVERTISEMENT

ಸಮಿತಿ ಇಲ್ಲಿ ಆಯೋಜಿಸಿದ್ದ ‘ಭೂಮಿ ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ’ದಲ್ಲಿ ಅವರು ಮಾತನಾಡಿದರು. ‘ಭೂರಹಿತರು ಮತ್ತು ಮನೆ ಇಲ್ಲದವರಿಗಾಗಿ ಹೋರಾಟ ಆರಂಭಿಸಿ 20 ವರ್ಷಗಳೇ ಕಳೆದಿವೆ. ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ’ ಎಂದರು. 

‘ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದ ಅವಧಿಯಲ್ಲಿ ಚರ್ಚೆ ನಡೆದರೂ, ಕೆಲಸ ಆಗಲಿಲ್ಲ. ಯಡಿಯೂರಪ್ಪ ಸಿ.ಎಂ ಆಗಿದ್ದಾಗ ಮನವಿ ಹಿಡಿದುಕೊಂಡು ಹೋದರೆ, ಗೃಹ ಕಚೇರಿ ಒಳಗೇ ಬಿಟ್ಟುಕೊಳ್ಳುತ್ತಿರಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಕೆಲಸ ಆಗುವುದಿಲ್ಲ ಎಂದೇ ಜಾಗೃತ ಕರ್ನಾಟಕ, ಕರ್ನಾಟಕ ಜನಶಕ್ತಿ ಮೊದಲಾದ ಸಂಘಟನೆಗಳು ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಿದವು. ಆದರೆ ಕಾಂಗ್ರೆಸ್‌ ಸರ್ಕಾರ ಸಹ ಏನೂ ಮಾಡುತ್ತಿಲ್ಲ’ ಎಂದು ಆರೋಪಿಸಿದರು. 

ಸಮಿತಿಯ ಉಪಾಧ್ಯಕ್ಷ ಸಿರಿಮನೆ ನಾಗರಾಜ್‌ ಮಾತನಾಡಿ, ‘ಒಂದೆರಡು ಗಂಟೆಯ ಪ್ರತಿಭಟನೆ ಸ್ವರೂಪದ ಸಾಂಕೇತಿಕ ಹೋರಾಟದಿಂದ ಉಪಯೋಗವಿಲ್ಲ ಎಂಬುದು ಅರ್ಥವಾಗಿದೆ. ಹೀಗಾಗಿ ನಾವು ಪ್ರಬಲ ಹೋರಾಟ ಕಟ್ಟಬೇಕು. ಅಂಕಿಅಂಶಗಳು, ದಾಖಲೆ ಆಧಾರದಲ್ಲಿ ಹಕ್ಕುಗಳನ್ನು ಪ್ರತಿಪಾದಿಸಬೇಕು ಮತ್ತು ಅಗತ್ಯವಿದ್ದಲ್ಲಿ ಕಾನೂನು ಹೋರಾಟ ನಡೆಸಬೇಕು’ ಎಂದರು.

ಸಚಿವ ಕೃಷ್ಣ ಬೈರೇಗೌಡಗೆ ಸಮಾವೇಶದ ನಿರ್ಣಯ ಪತ್ರ ಸಲ್ಲಿಕೆ ಅರಣ್ಯಭೂಮಿ ಹಂಚಿಕೆಗೆ ಹಲವು ಕಾನೂನು ತೊಡಕುಗಳಿವೆ: ಸಚಿವ ಅರ್ಹರಿಗಷ್ಟೇ ಭೂಮಿ ಮಂಜೂರು ಮಾಡುವ ಭರವಸೆ

‘ಮನುವಾದ ಜಾರಿಗೆ ತರುತ್ತಿರುವ ಮೋದಿ’

‘ಶೂದ್ರ ದಲಿತ ಮತ್ತು ಮಹಿಳೆಯರಿಗೆ ಭೂಮಿ ಅಥವಾ ಸಂಪತ್ತು ಹೊಂದುವ ಅಧಿಕಾರ ಇಲ್ಲ ಎಂದು ಮನುಸ್ಮೃತಿ ಹೇಳುತ್ತದೆ. ಸಂವಿಧಾನವು ಇವರಿಗೆ ಈ ಅಧಿಕಾರವನ್ನು ಕೊಟ್ಟಿದೆ. ಆದರೆ ಕೇಂದ್ರದಲ್ಲಿರುವ ಈಗಿನ ಸರ್ಕಾರವು ಈ ಹಕ್ಕು ಮತ್ತು ಅಧಿಕಾರಗಳನ್ನು ಕಿತ್ತುಕೊಳ್ಳುತ್ತಿದೆ. ನರೇಂದ್ರ ಮೋದಿ ಮನುವಾದವನ್ನು ಜಾರಿಗೆ ತರುತ್ತಿದ್ದಾರೆ’ ಎಂದು ಗುಜರಾತ್‌ ಶಾಸಕ ಜಿಗ್ನೇಶ್ ಮೆವಾನಿ ಆರೋಪಿಸಿದರು. ‘70 ವರ್ಷಗಳಲ್ಲಿ ಸಂವಿಧಾನವು ನೀಡಿರುವ ಭೂಮಿ ಮತ್ತು ವಿವಿಧ ಹೋರಾಟಗಳ ಮೂಲಕ ತಳಸಮುದಾಯದವರು ಗಳಿಸಿಕೊಂಡಿದ್ದ ಭೂಮಿಯನ್ನು ಬಂಡವಾಳಶಾಹಿಗಳಿಗಾಗಿ ಕಿತ್ತುಕೊಳ್ಳಲಾಗುತ್ತಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ’ ಎಂದು ಅವರು ಹೇಳಿದರು. ಸಮಿತಿಯ ಸದಸ್ಯ ಕೆ.ಎಲ್‌.ಅಶೋಕ್‌ ಮಾತನಾಡಿ ‘ಬುಡಕಟ್ಟು–ಆದಿವಾಸಿ ಸಮುದಾಯಗಳನ್ನು ರಾಷ್ಟ್ರೀಯ ಉದ್ಯಾನ ಹುಲಿ ಯೋಜನೆ ಕಸ್ತೂರಿ ರಂಗನ್‌ ವರದಿ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಯತ್ನಗಳು ನಡೆಯುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.