ರಾಮನಗರ: ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸಂಪೂರ್ಣ ಬಹುಮತ ಇದೆ ಎಂಬ ಉದ್ಧಟತನದಿಂದ ಕೇಂದ್ರ ಬಿಜೆಪಿ ಸರ್ಕಾರ ಸಿಎಎ ಜಾರಿಗೆ ಹೊರಟಿದೆ. ಇದರ ವಿರುದ್ಧ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ದೇಶವನ್ನು ಒಡೆಯುವ ಯತ್ನಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕೈಹಾಕಿದ್ದಾರೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂ ಧರ್ಮ ಮಾತ್ರ ಈ ದೇಶದ ಧರ್ಮ ಅಲ್ಲ. ಸಂವಿಧಾನ ನಮ್ಮ ಧರ್ಮ. ಇಂತಹ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸರ್ಕಾರ ನಡೆಯುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಜನವರಿಯಿಂದ ಕಾಯ್ದೆ ಜಾರಿಗೆ ತರಲು ಹೊರಟಿದೆ. ಗೋಲಿಬಾರ್ ನಡೆಸಿದ ನಿಮಗೆ ಮನುಷ್ಯತ್ವ ಇದೆಯಾ? ಜೀವಗಳ ಜೊತೆ ಏಕೆ ಚೆಲ್ಲಾಟ ಆಡುತ್ತೀರಿ? ಎಂದು ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು.
ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಗಳೂರಿನಲ್ಲಿ ಒಂದೇ ಗಲಭೆ ಆಗಿರಲಿಲ್ಲ. ಇಂದು ಮಂಗಳೂರಿನಲ್ಲಿ ಗಲಭೆಗೆ ಪೊಲೀಸರೇ ಕಾರಣ. ಮಂಗಳೂರಿನ ಕೆಲವು ಬಿಜೆಪಿ ಮುಖಂಡರ ಆದೇಶದ ಮೇಲೆ ಗುಂಡು ಹಾರಿಸಲಾಗಿದೆ. ಶಾಂತಿ ಸಂಧಾನಕ್ಕೆ ಬಂದ ಮಾಜಿ ಮೇಯರ್ ಗೆ ರಬ್ಬರ್ ಗುಂಡು ಹಾರಿಸಲಾಗಿದೆ. ಟೆಂಪೋದಲ್ಲಿ ಮನೆ ಕಟ್ಟಲು ಕಲ್ಲು ತುಂಬಿಕೊಂಡು ಹೋಗುತ್ತಿದ್ದದ್ದೋ ಏನೋ... ಅದನ್ನು ಗಲಭೆಗೆ ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ತಪ್ಪು ಸಂದೇಶ ರವಾನಿಸಬಾರದು ಎಂದು ಮನವಿ ಮಾಡಿದರು.
ಸಂಸದ ಡಿ.ಕೆ. ಸುರೇಶ್, ಶಾಸಕಿ ಅನಿತಾ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.