ADVERTISEMENT

ಎಚ್‌ಎಂಟಿ ಜಮೀನು ಮರುವಶದ ವಿರುದ್ಧ ಹೋರಾಟ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:13 IST
Last Updated 26 ಅಕ್ಟೋಬರ್ 2024, 15:13 IST
ಎಚ್‌ಎಂಟಿ ಕ್ಯಾಂಪಸ್‌ನಲ್ಲಿನ ಪೀಣ್ಯ ಪ್ಲಾಂಟೇಷನ್‌ನ ಐದು ಎಕರೆ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಮರುವಶಕ್ಕೆ ಪಡೆದಿದ್ದರು
ಎಚ್‌ಎಂಟಿ ಕ್ಯಾಂಪಸ್‌ನಲ್ಲಿನ ಪೀಣ್ಯ ಪ್ಲಾಂಟೇಷನ್‌ನ ಐದು ಎಕರೆ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಮರುವಶಕ್ಕೆ ಪಡೆದಿದ್ದರು   

ಬೆಂಗಳೂರು: ‘ಎಚ್‌ಎಂಟಿ ಸಂಸ್ಥೆಗೆ ಸೇರಿದ ಐದು ಎಕರೆ ಜಮೀನನ್ನು ಅರಣ್ಯ ಇಲಾಖೆ ಮರುವಶ ಮಾಡಿಕೊಂಡಿರುವುದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಜಾಲಹಳ್ಳಿ–ಪೀಣ್ಯ ಗ್ರಾಮಗಳ ವ್ಯಾಪ್ತಿಯಲ್ಲಿರುವ ಎಚ್‌ಎಂಟಿ ಕ್ಯಾಂಪಸ್‌ನ ಐದು ಎಕರೆ ಅರಣ್ಯ ಜಮೀನನ್ನು ಅರಣ್ಯ ಇಲಾಖೆ ಶುಕ್ರವಾರ ಮರುವಶಕ್ಕೆ ಪಡೆದಿತ್ತು. ಅದರಲ್ಲಿನ ಕೆಲ ಸಣ್ಣ–ಪುಟ್ಟ ಒತ್ತುವರಿಗಳನ್ನು ತೆರವು ಮಾಡಿ, ‘ಪೀಣ್ಯ ಪ್ಲಾಂಟೇಷನ್‌’ ಎಂದು ಫಲಕ ಹಾಕಿತ್ತು.

ಸುದ್ದಿಗಾರರ ಪ್ರಶ್ನೆಗೆ ಅವರು, ‘ಎಚ್‌ಎಂಟಿ ಜಮೀನಿಗೆ ಸಂಬಂಧಿಸಿದ ಕೆಲ ಅರ್ಜಿಗಳು ಕೋರ್ಟ್‌ನಲ್ಲಿದೆ. ಐದು ಎಕರೆ ಜಮೀನನ್ನು ಬಲವಂತವಾಗಿ ವಶಕ್ಕೆ ಪಡೆದು, ಬೇಲಿ ಹಾಕಿದ್ದಾರೆ. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ’ ಎಂದರು.

ADVERTISEMENT

‘ನ್ಯಾಯಾಲಯದ ಆದೇಶವಿದೆ ಎಂದು ಅರಣ್ಯ ಇಲಾಖೆಯು ಹೇಳಿದೆ. ಅಂತಹ ಆದೇಶಗಳಿಗೆ ಎಚ್‌ಎಂಟಿ ಮತ್ತು ಅಧಿಕಾರಿಗಳು ತಲೆಬಾಗಲೇಬೇಕಾಗುತ್ತದೆ. ಮುಂದಿನ ನಡೆ ಏನಿರಬೇಕು ಎಂಬುದನ್ನು ಪರಿಶೀಲಿಸುತ್ತೇವೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಎಚ್‌ಎಂಟಿ ಕ್ಯಾಂಪಸ್‌ನಲ್ಲಿ ಬಳಕೆ ಮಾಡದ ಅರಣ್ಯ ಪ್ರದೇಶವನ್ನು ವಾಪಸ್‌ ಪಡೆದು, ಅಲ್ಲಿ ಕಬ್ಬನ್‌ ಉದ್ಯಾನ ಮತ್ತು ಲಾಲ್‌ಬಾಗ್‌ನಂತಹ ವೃಕ್ಷೋದ್ಯಾನ ನಿರ್ಮಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದರು.

ಎಚ್‌ಎಂಟಿ ವಶದಲ್ಲಿರುವ ಯಾವ ಪ್ರದೇಶವನ್ನೂ ಬಿಟ್ಟುಕೊಡುವುದಿಲ್ಲ ಎಂದು ಕುಮಾರಸ್ವಾಮಿ ಅವರೂ ಪ್ರತಿಪಾದಿಸಿದ್ದರು. ಇದರ ಮಧ್ಯೆಯೇ ಅರಣ್ಯ ಇಲಾಖೆಯು, ಅರಣ್ಯ ಜಮೀನು ಮರುವಶ ಕಾರ್ಯಾಚರಣೆ ಆರಂಭಿಸಿದೆ.

‘ಮಾಜಿ ಸ್ಪೀಕರ್‌ರಿಂದ ಅರಣ್ಯ ಜಮೀನು ಲೂಟಿ’

‘ಮಾಜಿ ಸ್ಪೀಕರ್‌ ಒಬ್ಬರು ಶ್ರೀನಿವಾಸಪುರದಲ್ಲಿ ಅರಣ್ಯ ಜಮೀನನ್ನು ಲೂಟಿ ಹೊಡೆದಿದ್ದಾರೆ. ಅರಣ್ಯ ಸಚಿವ ಖಂಡ್ರೆ ಅವರು ಆ ಒತ್ತುವರಿಯನ್ನು ತೆರವು ಮಾಡುವ ಕೆಲಸ ಮೊದಲು ಮಾಡಲಿ’ ಎಂದು ಕುಮಾರಸ್ವಾಮಿ ಹೇಳಿದರು. ‘ಆ ಒತ್ತುವರಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶವನ್ನು ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ. ಆ ಆದೇಶವನ್ನು ಪಾಲಿಸುವ ಕೆಲಸವನ್ನು ಮಾಡಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.