ADVERTISEMENT

‘ರೋರಿಚ್‌ ಎಸ್ಟೇಟ್‌ನಲ್ಲಿ ಫಿಲಂ ಸಿಟಿ’

ಅಂತರರಾಷ್ಟ್ರೀಯ ಮಟ್ಟದ ಚಿತ್ರ ನಗರಿ ನಿರ್ಮಿಸಲು ನಿರ್ಧಾರ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 19:58 IST
Last Updated 15 ಸೆಪ್ಟೆಂಬರ್ 2019, 19:58 IST
ಬೆಂಗಳೂರಿನಲ್ಲಿ ಭಾನುವಾರ ಅದ್ವೈತ್ ಹುಂಡೈನ ನಿರ್ದೇಶಕ ಡಾ. ಎಸ್. ವಿ. ಎಸ್. ಸುಬ್ರಹ್ಮಣ್ಯ ಗುಪ್ತಾ ಅವರಿಗೆ 2019ನೇ ಸಾಲಿನ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸದ ಜೈರಾಂ ರಮೇಶ್‌, ಎಫ್‌ಕೆಸಿಸಿಐ ಅಧ್ಯಕ್ಷ ಸಿ. ಆರ್. ಜನಾರ್ದನ, ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ, ಎಫ್‌ಕೆಸಿಸಿಐ ಉಪಾಧ್ಯಕ್ಷ ಐ. ಎಸ್‌. ಪ್ರಸಾದ್‌, ಹಿರಿಯ ಉಪಾಧ್ಯಕ್ಷ ಪರಿಕಲ್‌ ಎಂ. ಸುಂದರ್ ಇದ್ದರು ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಭಾನುವಾರ ಅದ್ವೈತ್ ಹುಂಡೈನ ನಿರ್ದೇಶಕ ಡಾ. ಎಸ್. ವಿ. ಎಸ್. ಸುಬ್ರಹ್ಮಣ್ಯ ಗುಪ್ತಾ ಅವರಿಗೆ 2019ನೇ ಸಾಲಿನ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸದ ಜೈರಾಂ ರಮೇಶ್‌, ಎಫ್‌ಕೆಸಿಸಿಐ ಅಧ್ಯಕ್ಷ ಸಿ. ಆರ್. ಜನಾರ್ದನ, ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ, ಎಫ್‌ಕೆಸಿಸಿಐ ಉಪಾಧ್ಯಕ್ಷ ಐ. ಎಸ್‌. ಪ್ರಸಾದ್‌, ಹಿರಿಯ ಉಪಾಧ್ಯಕ್ಷ ಪರಿಕಲ್‌ ಎಂ. ಸುಂದರ್ ಇದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಕನಕಪುರ ರಸ್ತೆಯಲ್ಲಿರುವ ಸುಮಾರು 700 ಎಕರೆ ವಿಸ್ತೀರ್ಣದ ರೋರಿಚ್‌ ಎಸ್ಟೇಟ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿತ್ರ ನಗರಿ (ಫಿಲಂ ಸಿಟಿ) ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹೇಳಿದರು.

ಇಲ್ಲಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಸಂಸ್ಥಾಪಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯವನ್ನು ಕೈಗಾರಿಕಾ ಸ್ನೇಹಿಯನ್ನಾಗಿ ಮಾಡಲು ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಹೆಚ್ಚಿನ ಉದ್ಯೋಗ ಸೃಷ್ಟಿಗಾಗಿ ವಲಯಗಳನ್ನು ನಿಖರವಾಗಿ ಗುರುತಿಸಿ ದೂರದೃಷ್ಟಿಯ ಕಾರ್ಯಕ್ರಮ ರೂಪಿಸಲಾಗುವುದು’ ಎಂದರು.

ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಿ, ‘ಉದ್ಯಮಿಗಳು ಇನ್ನಷ್ಟು ಪ್ರಗತಿಯ ಹಾದಿಯಲ್ಲಿ ಸಾಗಲು ಪ್ರಯತ್ನಿಸಬೇಕು, ಇದುವೇ ಅವರು ಮಾಡುವ ದೇಶಸೇವೆಯಾಗುತ್ತದೆ’ ಎಂದರು.

ADVERTISEMENT

ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಆರ್ಥಿಕ ತಜ್ಞ ಜೈರಾಂ ರಮೇಶ್‌ ಅವರು ಸರ್‌ ಎಂ. ವಿಶ್ವೇಶ್ವರಯ್ಯ ಮತ್ತು ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಒಡನಾಟದ ಮೇಲೆ ಬೆಳಕು ಚೆಲ್ಲಿದರು.

‘ಆಧುನಿಕ ಭಾರತವನ್ನು ನಿರ್ಮಿಸುವ ನೆಹರೂ ಅವರ ಕಲ್ಪನೆಯನ್ನು ಮರೆತರೆ ದೇಶ ಅವಸಾನದತ್ತ ಸಾಗಬಹುದು’ ಎಂದು ಅವರು ಎಚ್ಚರಿಸಿದರು.

ಅಧಿಕಾರಿಗಳ ಅಡ್ಡಗಾಲು:2019ನೇ ಸಾಲಿನ ಭಾರತ ರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅದ್ವೈತ್‌ ಹುಂಡೈ ಸಂಸ್ಥೆಯ ನಿರ್ದೇಶಕ ಡಾ. ಎಸ್‌. ವಿ. ಎಸ್‌. ಸುಬ್ರಹ್ಮಣ್ಯ ಗುಪ್ತ ಅವರು ಕರ್ನಾಟಕದ ಅಧಿಕಾರಿಗಳ ಅಸಹಕಾರ ವರ್ತನೆಯನ್ನು ಟೀಕಿಸಿದರು. ‘ಈ ಹಿಂದೆ ಹುಂಡೈ ಸಂಸ್ಥೆಯ ಕಾರು ತಯಾರಿಕಾ ಘಟಕ ಕರ್ನಾಟಕಕ್ಕೆ ಬರುವುದಿತ್ತು. ಆದರೆ ಅಧಿಕಾರಿಗಳ ಅಸಹಕಾರದಿಂದಾಗಿ ಅದು ಆಂಧ್ರಪ್ರದೇಶದ ಪಾಲಾಯಿತು’ ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷ ಸಿ. ಆರ್. ಜನಾರ್ದನ ಅವರು ಮುಂದಿನ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆಯುವ ಕೃಷಿ ಆಹಾರ ಸಮಾವೇಶ ಹಾಗೂ ಆ ಮೂಲಕ ಒಂದು ಸಾವಿರ ಉದ್ಯಮಿಗಳನ್ನು ಸೃಷ್ಟಿಸುವ ಪ್ರಯತ್ನಕ್ಕೆರಾಜ್ಯ ಸರ್ಕಾರದ ನೆರವು ಕೋರಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದಕ್ಕೆ ಸಮ್ಮತಿ ಸೂಚಿಸಿದರು.

****

ರೋರಿಚ್ ಎಸ್ಟೇಟ್‌ನಲ್ಲಿ ಸಿನಿನಗರಿ ನಿರ್ಮಾಣ ಮಾಡುವುದು ಖುಷಿ ತಂದಿದೆ. ಮೈಸೂರಿನಲ್ಲೂ ಆಗಲಿ, ಇದರಿಂದ ಚಿತ್ರೋದ್ಯಮಕ್ಕೆ ಅನುಕೂಲ

ಎಸ್.ವಿ. ರಾಜೇಂದ್ರಸಿಂಗ್ ಬಾಬು , ನಿರ್ದೇಶಕ

***

ರೋರಿಚ್‌ ಎಸ್ಟೇಟ್‌ನಲ್ಲಿ ಸಿನಿ ನಗರಿ ನಿರ್ಮಾಣದ ಘೋಷಣೆ ಕೇಳಿ ಸಂತೋಷವಾಗಿದೆ. ಬೆಂಗಳೂರಿಗೆ ಹತ್ತಿರವಿರುವುದರಿಂದ ಸಿನಿಮಾ ಉದ್ಯಮಕ್ಕೆ ಸಹಾಯವಾಗುತ್ತದೆ, ಕೆ. ಸಿ. ಎನ್‌. ಚಂದ್ರಶೇಖರ್‌ ನಿರ್ಮಾಪಕ

***

‘ಭಯಪಡುತ್ತಿರುವುದೇಕೆ?’

ಉದ್ಯಮಿಗಳಿಗೆ ಅನಗತ್ಯ ಕಿರುಕುಳ ನೀಡುವ ಅಧಿಕಾರಿಗಳ ವರ್ತನೆಗೆ ರಾಜ್ಯಪಾಲ ವಜುಭಾಯಿ ವಾಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ದಕ್ಷಿಣ ಭಾರತೀಯರಾದ ನೀವೆಲ್ಲ ಚಾಣಾಕ್ಷರಿದ್ದೀರಿ, ದಕ್ಷರಿದ್ದೀರಿ. ತೆರಿಗೆ ಪಾವತಿಸಿ, ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ನಿಮಗೆ ಅಧಿಕಾರಿಗಳಿಂದ ಆಗಾಗ ಅಡ್ಡಿ ಉಂಟಾಗುತ್ತಿದೆ. ಆದರೆ ನೀವು ಯಾರೂ ಅದನ್ನು ಪ್ರತಿಭಟಿಸುತ್ತಿಲ್ಲ. ನೀವು ಗಟ್ಟಿ ಧ್ವನಿಯಲ್ಲಿ ಮಾತನಾಡಲು ಭಯಪಡುತ್ತಿದ್ದೀರಿ. ಅದಕ್ಕಾಗಿಯೇ ನಿಮ್ಮ ಬೇಡಿಕೆಗಳು ತಕ್ಷಣಕ್ಕೆ ಈಡೇರದಂತಾಗಿದೆ’ ಎಂದು ಹೇಳಿದರು.

‘8 ತಿಂಗಳಲ್ಲಿ ಬೆಂಗಳೂರಿನ ಚಿತ್ರಣ ಬದಲು’

‘ಬೆಂಗಳೂರು ನಗರದ ಮೂಲಸೌಲಭ್ಯ ಸುಧಾರಣೆಗೆ ಸರ್ಕಾರ ಬಹಳ ಆದ್ಯತೆ ನೀಡುತ್ತಿದ್ದು, ಮುಂದಿನ ಏಳೆಂಟು ತಿಂಗಳಲ್ಲಿ ನಗರದ ಚಿತ್ರಣ ಬದಲಾಗಲಿದೆ’ ಎಂದು ಯಡಿಯೂರಪ್ಪ ಹೇಳಿದರು.

‘ನಾನು ಪ್ರತಿ 15 ದಿನಗಳಿಗೊಮ್ಮೆ ನಗರ ಪ್ರದಕ್ಷಿಣೆ ಮಾಡಿ ಸಮಸ್ಯೆ ತಿಳಿದುಕೊಳ್ಳುವ ಪ್ರಯತ್ನ ಆರಂಭಿಸಿದ್ದೇನೆ. ವರ್ತುಲ ರಸ್ತೆಗಾಗಿ ₹ 11,970 ಕೋಟಿ ತೆಗೆದಿರಿಸಲಾಗುವುದು. ಉಪನಗರ ರೈಲು ಯೋಜನೆಗಾಗಿ ₹ 16 ಸಾವಿರ ಕೋಟಿ ಯೋಜನೆ ಸಿದ್ಧವಾಗುತ್ತಿದೆ. ಹಲವು ಅಂಡರ್‌ಪಾಸ್‌ಗಳು, ಫ್ಲೈಓವರ್‌ಗಳಿಗಾಗಿ ₹ 11 ಸಾವಿರ ಕೋಟಿ ವ್ಯಯಿಸಲು ನಿರ್ಧರಿಸಲಾಗಿದೆ. ಮೆಟ್ರೊ ರೈಲನ್ನು ವಿಮಾನ ನಿಲ್ದಾಣದವರೆಗೆ ವಿಸ್ತರಿಸುವ ಯೋಜನೆಯೂ ಕಾರ್ಯರೂಪಕ್ಕೆ ಬರಲಿದೆ. ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಸ ವಿಲೇವಾರಿ ಸಮಸ್ಯೆ ಪರಿಹರಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.