ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ರಚಿಸಲಾಗಿರುವ ಕಾರ್ಯಪಡೆ, ತನ್ನ ಅಂತಿಮ ಶಿಫಾರಸುಗಳ ಕರಡನ್ನು ಸರ್ಕಾರಕ್ಕೆ ಶನಿವಾರ ಸಲ್ಲಿಸಲಿದೆ’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
‘ರಾಷ್ಟ್ರೀಯ ಶಿಕ್ಷಣ ನೀತಿ-2020; ವಿಶ್ವ ಗುರುವಾಗುವತ್ತ ಭಾರತ’ ಎಂಬ ವಿಷಯದ ಕುರಿತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಗುರುವಾರ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ನೇತೃತ್ವದ ಕಾರ್ಯಪಡೆ ಪ್ರಾಥಮಿಕ ಹಂತದ ಶಿಫಾರಸುಗಳನ್ನು ಈಗಾಗಲೇ ಸಲ್ಲಿಸಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಪಾಲ ವಜುಭಾಯಿ ವಾಲಾ, ‘ಎಲ್ಲ ಹಂತಗಳಲ್ಲೂ ಜ್ಞಾನವನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಗಳಿಸಿದ ಜ್ಞಾನವನ್ನು ಸಮಾಜಕ್ಕೇ ಮೀಸಲಿಡಬೇಕು. ಈ ವಿಷಯದಲ್ಲಿ ಬೋಧಕರ ಪಾತ್ರ ಅತಿದೊಡ್ಡದು’ ಎಂದರು.
ವೆಬಿನಾರ್‌ನಲ್ಲಿ ಭಾಗವಹಿಸಿದ್ದ ಶ್ರೀ ರವಿಶಂಕರ್ ಗುರೂಜಿ, ‘ತಂತ್ರಜ್ಞಾನ ಮತ್ತು ಅಧ್ಯಾತ್ಮವನ್ನು ಬೇರೆಬೇರೆಯಾಗಿ ನೋಡಬಾರದು. ತಂತ್ರಜ್ಞಾನ ಇಲ್ಲದಿದ್ದರೆ, ಜೀವನದಲ್ಲಿ ಆರಾಮ ಎನ್ನುವುದು ಇರುವುದಿಲ್ಲ. ಅದೇ ರೀತಿ ಮನಸ್ಸಿನಲ್ಲಿ ಶಾಂತಿ-ಪ್ರಸನ್ನತೆ ಇಲ್ಲದಿದ್ದರೆ ಜೀವನದಲ್ಲಿ ಶಾಂತಿ ಇರುವುದಿಲ್ಲ. ಜೀವನ ಮೌಲ್ಯಗಳನ್ನು ಅಳವಡಿಸಿರುವ ಶಿಕ್ಷಣ ಅಗತ್ಯ’ ಎಂದು ಪ್ರತಿಪಾದಿಸಿದರು.
ಶಿಕ್ಷಣ ಕ್ಷೇತ್ರದ ಕರಡು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನದ ಉದ್ದೇಶದಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಯಾರಿಸಿರುವ ಕರಡು ಕಾರ್ಯಸೂಚಿಯ ಬಗ್ಗೆ ಸಚಿವ ಎಸ್. ಸುರೇಶ್ ಕುಮಾರ್ ಅವರು ಇಲಾಖೆಯ ಅಧಿಕಾರಿಗಳ ಜೊತೆ ಗುರುವಾರ ವೆಬಿನಾರ್ ಮೂಲಕ ಸಭೆ ನಡೆಸಿದರು. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಮಗ್ರ ಶಿಕ್ಷಣ ಯೋಜನಾ ನಿರ್ದೇಶಕಿ ದೀಪಾ, ಶಿಕ್ಷಣ ಇಲಾಖೆಯ ಆಯುಕ್ತ ಅನ್ಬು ಕುಮಾರ್, ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕ ಕೃಷ್ಣಾಜಿ ಕರಿಚನ್ನಣ್ಣನವರ್, ಸಮಗ್ರ ಶಿಕ್ಷಣದ ಗೋಪಾಲಕೃಷ್ಣ ಹಾಗೂ ಕಾರ್ಯಪಡೆಯ ಸದಸ್ಯರೂ ಆಗಿರುವ ವಿಧಾನಪರಿಷತ್ ಸದಸ್ಯ ಅರುಣ್ ಶಹಾ ಪುರ, ಅಜೀಂ ಪ್ರೇಂಜಿ ವಿಶ್ವವಿದ್ಯಾಲ ಯದ ಹೃಷಿಕೇಶ್ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.