ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಹಣಕಾಸು ಆಯೋಗದ ಅನುದಾನದ ರೂಪದಲ್ಲಿ ಸಣ್ಣ ರಾಜ್ಯಗಳಾದ ಹಿಮಾಚಲ ಪ್ರದೇಶಕ್ಕೆ 31,272 ಕೋಟಿ, ಉತ್ತರಾಖಂಡಕ್ಕೆ ₹ 25,975 ಕೋಟಿ ಹಾಗೂ ಅಸ್ಸಾಂಗೆ ₹ 22,120 ಕೋಟಿ ಹರಿದು ಬಂದಿದ್ದರೆ, ಕರ್ನಾಟಕಕ್ಕೆ ಬಿಡುಗಡೆಯಾಗಿದ್ದು ₹16,066 ಕೋಟಿ ಮಾತ್ರ!
ಅಭಿವೃದ್ಧಿ ಕಾಮಗಾರಿಗಳಿಗಾಗಿ ವಿವಿಧ ಮೂಲಗಳಿಂದ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಅನುದಾನಗಳ ವಿವರವನ್ನು ಕೇಂದ್ರ ಸರ್ಕಾರ ನೀಡಿದೆ. ಈ ಸಂಬಂಧ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಸೋಮವಾರ ಲಿಖಿತ ಉತ್ತರ ನೀಡಿದ್ದಾರೆ. ಹಣಕಾಸು ಆಯೋಗದ ಅನುದಾನದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್) ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಎಂಎಫ್) ಸೇರಿವೆ. ಪಂಜಾಬ್, ರಾಜಸ್ಥಾನದಂತಹ ರಾಜ್ಯಗಳಿಗೆ ದೊಡ್ಡ ಮೊತ್ತ ದೊರಕಿದೆ.
ಕೇಂದ್ರದ ತೆರಿಗೆ ಪಾಲು ಹಾಗೂ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರವು ಕೇಂದ್ರದ ಜತೆಗೆ ಸಂಘರ್ಷಕ್ಕೆ ಇಳಿದಿದೆ.
ದಕ್ಷಿಣದ ರಾಜ್ಯಗಳ ಪೈಕಿ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕೇರಳಕ್ಕಿಂತ ಕಡಿಮೆ ಅನುದಾನ ಕರ್ನಾಟಕಕ್ಕೆ ಸಿಕ್ಕಿದೆ. ಆರ್ಥಿಕ ಸಂಕಷ್ಟದಿಂದ ಬಸವಳಿದಿರುವ ಕೇರಳಕ್ಕೆ ₹44,798 ಕೋಟಿ ಬಂದಿದೆ.
ಕೇಂದ್ರದ ಎಲ್ಲ ಅನುದಾನಗಳಲ್ಲಿ ಸಿಂಹಪಾಲು ಪಡೆಯುವ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ರಾಜ್ಯಗಳಿಗೆ ಇಲ್ಲೂ ಗರಿಷ್ಠ ಅನುದಾನ ಬಿಡುಗಡೆಯಾಗಿದೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲೂ ರಾಜ್ಯಕ್ಕೆ ಸಿಕ್ಕಿರುವ ಪಾಲು ಕಡಿಮೆ. ರಾಜ್ಯಕ್ಕೆ ಮೂರು ವರ್ಷಗಳಲ್ಲಿ ₹56,909 ಕೋಟಿ ಬಿಡುಗಡೆಯಾಗಿದೆ. ಅಸ್ಸಾಂಗೆ ₹71,021 ಕೋಟಿ, ರಾಜಸ್ಥಾನಕ್ಕೆ ₹74,067 ಕೋಟಿ, ಉತ್ತರ ಪ್ರದೇಶಕ್ಕೆ ₹1,59,629 ಕೋಟಿ ಕೊಡಲಾಗಿದೆ. ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತಿತರ ರಾಜ್ಯಗಳಿಗೆ ಭರಪೂರ ಅನುದಾನ ನೀಡಲಾಗಿದೆ.
ಕೇಂದ್ರ ವಲಯದ ಯೋಜನೆಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬಾಹ್ಯ ನೆರವಿನ ಯೋಜನೆಗಳಿಗೆ ಸಹಾಯಧನದ ರೂಪದಲ್ಲಿ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಬಂದಿದ್ದು ₹19.50 ಕೋಟಿಯಷ್ಟೇ. ಆಂಧ್ರ ಪ್ರದೇಶ, ಗುಜರಾತ್, ಗೋವಾ, ಬಿಹಾರ, ತಮಿಳುನಾಡು, ಸಿಕ್ಕಿಂ, ಮಹಾರಾಷ್ಟ್ರ ರಾಜ್ಯಗಳಿಗೆ ಮಾತ್ರ ವಿಶೇಷ ಅನುದಾನ ಕೊಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.