ADVERTISEMENT

ಸಂಕಷ್ಟದಲ್ಲಿ ಕಲಾ ವಲಯ | ಕಲಾವಿದರಿಗಿಲ್ಲ ಮಾಸಾಶನ ಹೆಚ್ಚಳದ ‘ಗ್ಯಾರಂಟಿ’

₹1 ಸಾವಿರ ಹೆಚ್ಚಳದ ಪ್ರಸ್ತಾವವನ್ನು ತಿರಸ್ಕರಿಸಿದ ಆರ್ಥಿಕ ಇಲಾಖೆ

ವರುಣ ಹೆಗಡೆ
Published 4 ಆಗಸ್ಟ್ 2024, 0:10 IST
Last Updated 4 ಆಗಸ್ಟ್ 2024, 0:10 IST
ಕನ್ನಡ ಭವನ
ಕನ್ನಡ ಭವನ   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಸಂಕಷ್ಟದಲ್ಲಿರುವ ಕಲಾವಿದರಿಗೆ ನೀಡಲಾಗುತ್ತಿರುವ ಮಾಸಾಶನ ಹೆಚ್ಚಳದ ಪ್ರಸ್ತಾವವನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ. ಇದರಿಂದಾಗಿ ಕಲಾವಿದರು ಮಾಸಿಕ ₹ 2 ಸಾವಿರಕ್ಕೇ ತೃಪ್ತಿಗೊಳ್ಳಬೇಕಾಗಿದೆ.

ಕಲಾವಿದರ ಮಾಸಾಶನವನ್ನು ಹೆಚ್ಚಳ ಮಾಡಬೇಕೆಂಬ ಕೂಗು ಸಾಂಸ್ಕೃತಿಕ ವಲಯದಲ್ಲಿದೆ. ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ, ಬಯಲಾಟ, ಲಲಿತ ಕಲೆ ಸೇರಿ ವಿವಿಧ ಕಲಾ ಪ್ರಕಾರಗಳಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ, ಕಷ್ಟದ ಸ್ಥಿತಿಯಲ್ಲಿರುವ ಕಲಾವಿದರು ಹಾಗೂ ಸಾಹಿತಿಗಳಿಗೆ ಇಲಾಖೆಯು ಮಾಸಾಶನ ನೀಡುತ್ತಿದೆ. ಇದರ ಫಲಾನುಭವಿಗಳಿಗೆ ಕನಿಷ್ಠ 58 ವರ್ಷವಾಗಿರಬೇಕು. ರಾಜ್ಯದಲ್ಲಿ ಪ್ರತಿ ವರ್ಷ ಹತ್ತು ಸಾವಿರಕ್ಕೂ ಅಧಿಕ ಮಂದಿ ಮಾಸಾಶನ ಪಡೆಯುತ್ತಿದ್ದಾರೆ.

ಈ ಮಾಸಾಶನವನ್ನು ₹ 5 ಸಾವಿರಕ್ಕೆ ಹೆಚ್ಚಳ ಮಾಡಬೇಕೆಂದು ಕಲಾವಿದರ ನಿಯೋಗ ಜಿಲ್ಲಾಧಿಕಾರಿಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಮಣಿದ ಇಲಾಖೆ, ₹ 2 ಸಾವಿರ ಇರುವ ಮಾಸಾಶನವನ್ನು ₹ 3 ಸಾವಿರಕ್ಕೆ ಏರಿಸಲು ನಿರ್ಧರಿಸಿತ್ತು. ಈ ಸಂಬಂಧ ಇಲಾಖೆಯು ಪ್ರಸ್ತಾವವನ್ನು ಹಣಕಾಸು ಇಲಾಖೆಗೆ ಸಲ್ಲಿಸಿತ್ತು. ಆದರೆ, ‘ಗ್ಯಾರಂಟಿ’ ಯೋಜನೆಗಳಿಗೆ ಸಾವಿರಾರು ಕೋಟಿ ವೆಚ್ಚ ಮಾಡಿರುವುದರಿಂದ ಈ ಪ್ರಸ್ತಾವವನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ. ಇನ್ನೊಂದೆಡೆ 2023–24ನೇ ಸಾಲಿನ ಧನಸಹಾಯದ 2ನೇ ಕಂತಿನ ಹಣವನ್ನೂ ಬಿಡುಗಡೆ ಮಾಡಿಲ್ಲ. ಇದರಿಂದ ಕಲಾವಿದರು ಕಂಗಾಲಾಗಿದ್ದಾರೆ.

ADVERTISEMENT

ಸಂಕಷ್ಟದಲ್ಲಿ ಕಲಾವಿದರು:

2020ರಲ್ಲಿ ಕೋವಿಡ್‌ ಸಾಂಕ್ರಾಮಿಕವು ರಾಜ್ಯ ಪ್ರವೇಶಿಸಿದ ಬಳಿಕ ಸಾಂಸ್ಕೃತಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಸುಮಾರು ಎರಡೂವರೆ ವರ್ಷ ಅವಕಾಶಗಳಿಲ್ಲದೆ ಕಲಾವಿದರು ಸಂಕಷ್ಟಕ್ಕೆ ಸಿಲುಕಿ, ಅನ್ಯ ವೃತ್ತಿ ಅವಲಂಬಿಸಿದ್ದರು. ಆ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ಸರ್ಕಾರ ಘೋಷಿಸಿದ್ದ ₹ 3 ಸಾವಿರ ನೆರವಿಗೆ 26 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಹಿರಿಯ ಕಲಾವಿದರ ಮಾಸಾಶನ ಹೆಚ್ಚಿಸುವಂತೆ ರಾಜ್ಯದಾದ್ಯಂತ ಕಲಾವಿದರು ಆಗ್ರಹಿಸಿದ್ದರು. ಆಗ ಬಿಜೆಪಿ ನೇತೃತ್ವದ ಸರ್ಕಾರ ಮಾಸಾಶನ ಹೆಚ್ಚಳದ ಭರವಸೆ ನೀಡಿದ್ದರೂ ಸಾಕಾರಗೊಂಡಿರಲಿಲ್ಲ.

‘ಮಾಸಾಶನಕ್ಕೆ ಸಂಬಂಧಿಸಿದಂತೆ ಸಚಿವ ಶಿವರಾಜ್ ತಂಗಡಗಿ ಅವರು ಸಭೆ ನಡೆಸಿ, ₹ 3 ಸಾವಿರಕ್ಕೆ ಹೆಚ್ಚಿಸಲು ಕ್ರಮವಹಿಸುವಂತೆ ಸೂಚಿಸಿದ್ದರು. ಅದರಂತೆ ಕಲಾವಿದರ ಮಾಹಿತಿಯೊಂದಿಗೆ ಕಡತವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿತ್ತು. ಆರ್ಥಿಕ ಇಲಾಖೆ ಪ್ರಸ್ತಾವವನ್ನು ತಿರಸ್ಕರಿಸಿದೆ. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಳಕೆಯಾಗುತ್ತಿರುವುದರಿಂದ ಇಲಾಖೆಯ ಅನುದಾನದಲ್ಲಿಯೂ ಕಡಿತ ಮಾಡಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಧನಸಹಾಯದ 2ನೇ ಕಂತು ಬಾಕಿ

ಸಂಸ್ಕೃತಿ ಇಲಾಖೆಯು 2023–24ನೇ ಸಾಲಿನ ಧನಸಹಾಯದ ಮೊದಲ ಕಂತನ್ನು ಕಳೆದ ಮಾರ್ಚ್‌ನಲ್ಲಿ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು. ಇದೇ ಮೊದಲ ಬಾರಿಗೆ ಕಂತು ರೂಪದಲ್ಲಿ ಅನುದಾನ ಒದಗಿಸಿರುವುದು ಕಲಾವಿದರ ಆಕ್ರೋಶಕ್ಕೆ ಕಾರಣವಾಗಿತ್ತು. ಎರಡನೇ ಕಂತು ಈವರೆಗೂ ಬಿಡುಗಡೆಯಾಗದಿರುವುದರಿಂದ ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು ಗೊಂದಲಕ್ಕೆ ಒಳಗಾಗಿದ್ದು ಆದಷ್ಟು ಶೀಘ್ರ ಬಿಡುಗಡೆ ಮಾಡುವಂತೆ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ. 

ರಾಜ್ಯದಲ್ಲಿ ಏಳು ಸಾವಿರಕ್ಕೂ ಅಧಿಕ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿದ್ದರೂ ಅರ್ಜಿ ಅಲ್ಲಿಸುವ ನಾಲ್ಕು ಸಾವಿರಕ್ಕೂ ಹೆಚ್ಚು ಸಂಘ–ಸಂಸ್ಥೆಗಳಲ್ಲಿ ಒಂದು ಸಾವಿರದಿಂದ 1500 ಸಂಘ–ಸಂಸ್ಥೆಗಳಿಗೆ ಧನಸಹಾಯ ಒದಗಿಸಲಾಗುತ್ತಿದೆ. ಇಲಾಖೆಯ ಖಜಾನೆಯಲ್ಲಿ ₹6 ಕೋಟಿ ಮಾತ್ರ ಅನುದಾನ ಧನಸಹಾಯಕ್ಕೆ ಲಭ್ಯವಿದ್ದರಿಂದ ಸಾಮಾನ್ಯ ವರ್ಗದಲ್ಲಿ 831 ಪರಿಶಿಷ್ಟ ಜಾತಿ ಉಪಯೋಜನೆಯಡಿ 519 ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ 97 ಸಂಘ–ಸಂಸ್ಥೆಗಳಿಗೆ ಮೊದಲ ಕಂತು ಹಂಚಿಕೆ ಮಾಡಲಾಗಿದೆ.

ವರ್ಷವಾರು ಮಾಸಾಶನ ಪಡೆದ ಕಲಾವಿದರು (ವರ್ಷ; ಕಲಾವಿದರು)

2020–21; 12171

2021–22; 11264

2022–23; 10659

2023–24; 13108

ಧನಸಹಾಯದ ಎರಡನೇ ಕಂತನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಂಡಿದ್ದೇವೆ. ಅನುದಾನ ಬಂದೊಡನೆ ಸಂಘ–ಸಂಸ್ಥೆಗಳಿಗೆ ಬಾಕಿ ಹಣ ಬಿಡುಗಡೆ ಮಾಡಲಾಗುತ್ತದೆ
-ಧರಣೀದೇವಿ ಮಾಲಗತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.