ಬೆಂಗಳೂರು: ‘ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ವಿಶ್ವವಿದ್ಯಾಲಯದ ಕುಲಪತಿ ಭಿಕ್ಷುಕರ ರೀತಿಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳ ಮುಂದೆ ಕೈಚಾಚಬೇಕಾಗಿದೆ’ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ವಿಧಾನ ಪರಿಷತ್‌ನಲ್ಲಿ ಕಳವಳ ವ್ಯಕ್ತಪಡಿಸಿದರು.
ವಿಧಾನ ಪರಿಷತ್‌ನಲ್ಲಿ ಸೋಮವಾರ ಗಮನಸೆಳೆಯುವ ಸೂಚನೆ ಮಂಡಿಸಿದ ಬಿಜೆಪಿಯ ಎಸ್.ವಿ. ಸಂಕನೂರು ಅವರು, ‘ಆರ್ಥಿಕ ಸಂಕಷ್ಟದಿಂದ ರಾಜ್ಯದಲ್ಲಿ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಮುಚ್ಚುವ ಸ್ಥಿತಿಗೆ ತಲುಪಿದೆ. ಈ ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಸ್ಥಿತಿಯೂ ಹದಗೆಟ್ಟಿದೆ. ಸಂಶೋಧನಾ ಚಟುವಟಿಕೆಗಳು ಸ್ಥಗಿತಗೊಂಡಿವೆ’ ಎಂದು ತಿಳಿಸಿದರು.
‘ಪ್ರತಿ ವರ್ಷ ಅನುದಾನ ಕಡಿತಗೊಳಿಸಲಾಗಿದ್ದು, ವೇತನ ಮತ್ತು ಪಿಂಚಣಿ ನೀಡಲು ಪರದಾಡಬೇಕಾಗಿದೆ. ವೇತನ ಮತ್ತು ಪಿಂಚಣಿಗೆ ಸಂಬಂಧಿಸಿದಂತೆ 2018ರಿಂದ 2023ರವರೆಗೆ ₹57.56 ಕೋಟಿ ಕಡಿತಗೊಳಿಸಲಾಗಿದೆ. ಆಂತರಿಕ ಸಂಪನ್ಮೂಲಗಳಿಂದ ನಿರ್ವಹಣೆ ಮಾಡಬೇಕು ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ, ಈಗಿರುವ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ನಿಶ್ಚಿತ ಠೇವಣಿ ಸಹ ಖರ್ಚು ಮಾಡಿದ್ದರಿಂದ ಆರ್ಥಿಕವಾಗಿ ದಿವಾಳಿಯಾಗಲಿದೆ’ ಎಂದು ವಿವರಿಸಿದರು.
ಕಾಂಗ್ರೆಸ್‌ನ ಜಗದೀಶ ಶೆಟ್ಟರ್ ದನಿಗೂಡಿಸಿ, ‘ಕರ್ನಾಟಕ ವಿಶ್ವವಿದ್ಯಾಲಯ ಪರಿಸ್ಥಿತಿ ಗಂಭೀರವಾಗಿದೆ. ಇದೇ ರೀತಿಯಾದರೆ ಕೆಲವು ವರ್ಷಗಳಲ್ಲಿ ಮುಚ್ಚಿ ಹೋಗುತ್ತದೆ’ ಎಂದರು.
ಬಿಜೆಪಿಯ ಸಾಬಣ್ಣ ತಳವಾರ, ‘ಹೊಸದಾಗಿ ವಿಶ್ವವಿದ್ಯಾಲಯಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಆಂತರಿಕ ಸಂಪನ್ಮೂಲದ ಕೊರತೆಯಾಗಿದೆ. ಹಿಂದಿನ ಕುಲಪತಿ ಅವರು ಕೈಗೊಂಡ ವಿವಿಧ ಕಾಮಗಾರಿಗಳಿಂದ ₹600 ಕೋಟಿ ಸಾಲದ ಹೊರೆ ಕರ್ನಾಟಕ ವಿಶ್ವವಿದ್ಯಾಲಯದ ಮೇಲಿದೆ’ ಎಂದು ವಿವರಿಸಿದರು.
ಈ ಬಗ್ಗೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು, ‘ಇತ್ತೀಚೆಗೆ ಹಲವು ಕಾಲೇಜುಗಳು ವಿಶ್ವವಿದ್ಯಾಲಯ ಸ್ಥಾನಮಾನ ಪಡೆದಿದ್ದರಿಂದ ಹಳೆಯ ವಿಶ್ವವಿದ್ಯಾಲಯಗಳಿಗೆ ಆಂತರಿಕ ಸಂಪನ್ಮೂಲಗಳು ಕಡಿಮೆಯಾಗಿವೆ. ಅವೈಜ್ಞಾನಿಕವಾಗಿ ಎಲ್ಲ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳನ್ನು ಆರಂಭಿಸಿದ್ದರಿಂದ ಸಮಸ್ಯೆಗಳು ಸೃಷ್ಟಿಯಾಗಿವೆ’ ಎಂದು ತಿಳಿಸಿದರು.
‘ವಿಶ್ವವಿದ್ಯಾಲಯಗಳಲ್ಲಿ ಉತ್ತರದಾಯಿತ್ವ ಇಲ್ಲ. ಹಣಕಾಸು ಶಿಸ್ತು ಇಲ್ಲ. ಜಾನಪದ ವಿಶ್ವವಿದ್ಯಾಲಯದ ನೇಮಕಾತಿಯಲ್ಲೂ ಗೊಂದಲ ಇದೆ. ನೇಮಕಾತಿಗಳಲ್ಲಿ ಪಾರದರ್ಶಕ ವ್ಯವಸ್ಥೆ ತರಬೇಕಾಗಿದೆ. ವಿಶ್ವವಿದ್ಯಾಲಯದ ಸಮಸ್ಯೆಗಳ ಬಗ್ಗೆ ಶೀಘ್ರ ಸಭೆ ಕರೆದು ಚರ್ಚಿಸಲಾಗುವುದು. ಕರ್ನಾಟಕ ವಿಶ್ವವಿದ್ಯಾಲಯಕ್ಕೆ ವೇತನ ಮತ್ತು ಪಿಂಚಣಿಗಾಗಿ 2022–23ನೇ ಸಾಲಿನಲ್ಲಿ 180.96 ಕೋಟಿ ಮತ್ತು 2023–24ನೇ ಸಾಲಿನಲ್ಲಿ 142.80 ಕೋಟಿ ಹಂಚಿಕೆಯಾಗಿದೆ’ ಎಂದರು.
ಕುಲಪತಿ ಅವರು ಕ್ಲರ್ಕ್ ಮುಂದೆ ಕೈಕಟ್ಟಿ ಕುಳಿತುಕೊಳ್ಳಬೇಕಾಗಿದೆ. ಸರ್ಕಾರ ನೀಡಬೇಕಾದ ಅನುದಾನವನ್ನು ಕೊಡಬೇಕು.
-ಬಸವರಾಜ ಹೊರಟ್ಟಿ ಸಭಾಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.