ಬೆಂಗಳೂರು: ‘ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕೋಲ್ಕತ್ತ ಮೂಲದ ಮಹಿಳೆ ಡಾ. ಸೋಮದತ್ತ ಮಾಡಿರುವ ಲೈಂಗಿಕ ಕಿರುಕುಳ (ಮೀಟೂ) ಆರೋಪ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅದನ್ನು ತೇಜಸ್ವಿ ತಮ್ಮ ಪ್ರಮಾಣಪತ್ರದಲ್ಲಿ ನಮೂದಿಲ್ಲ’ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಇತ್ತೀಚೆಗೆ ಸಿ.ಡಿ ಒಂದು ಬಿಡುಗಡೆಯಾಗಿದ್ದು, ಅದರಲ್ಲಿ ತಾನು ಸೇರಿದಂತೆ ಮೂವರು ಮಹಿಳೆಯರ ಮೇಲೆ ತೇಜಸ್ವಿ ಸೂರ್ಯ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ, ಈ ವಿಷಯವನ್ನು ತೇಜಸ್ವಿ ಬಹಿರಂಗಪಡಿಸಿಲ್ಲ’ ಎಂದರು.
‘ತೇಜಸ್ವಿ ಸೂರ್ಯ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಬಿಜೆಪಿ ನಾಯಕರಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೂ ಈ ವಿಷಯ ಗೊತ್ತಿತ್ತು. ಅವರೂ ಈ ವಿಷಯದಲ್ಲಿ ಮೌನ ವಹಿಸಿದ್ದಾರೆ’ ಎಂದು ದೂರಿದರು.
‘ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ ಪ್ರಭಾವಿ ಶಾಸಕರಾಗಿದ್ದು, ಹಾಲಿ ಸಂಸದರಾಗಿದ್ದ ಅನಂತಕುಮಾರ್ ಅವರ ಪತ್ನಿಗೆ ಕ್ಷೇತ್ರದ ಟಿಕೆಟ್ ತಪ್ಪಿಸಿ ತೇಜಸ್ವಿ ಸೂರ್ಯನಿಗೆ ಟಿಕೆಟ್ ಸಿಗುವಂತೆ ಮಾಡಿದ್ದರು. ಅದೇ ರೀತಿ ತೇಜಸ್ವಿ ವಿರುದ್ಧದ ಲೈಂಗಿಕ ಪ್ರಕರಣವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದರು.
‘ಸೋಮದತ್ತಾಗೆ ಬಿಜೆಪಿ ನಾಯಕರು ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ, ಮಾಧ್ಯಮಗಳ ಮುಂದೆ ಬರಲು ಅವರಿಗೆ ಸಾಧ್ಯ ಆಗುತ್ತಿಲ್ಲ’ ಎಂದೂ ಬ್ರಿಜೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.