ADVERTISEMENT

ಬಿಡಿಎ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ಬಿಎಸ್‌ವೈ, ಇತರರ ವಿರುದ್ಧ ಎಫ್‌ಐಆರ್

ಬಿಜಯೇಂದ್ರ, ಎಸ್.ಟಿ.‌ಸೋಮಶೇಖರ್ ಸೇರಿ ಒಂಬತ್ತು ಮಂದಿ ವಿರುದ್ಧ ಲೋಕಾಯುಕ್ತ ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 19:17 IST
Last Updated 17 ಸೆಪ್ಟೆಂಬರ್ 2022, 19:17 IST
   

ಬೆಂಗಳೂರು: ಬಿಡಿಎ ವಸತಿ ಯೋಜನೆಯೊಂದರ ಕಾಮಗಾರಿಯ ಗುತ್ತಿಗೆ ನೀಡಲು ಗುತ್ತಿಗೆದಾರರಿಂದ ಲಂಚ ಪಡೆದ ಆರೋಪದ ಮೇಲೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಬಿಜೆಪಿ ಶಾಸಕ ಬಿ.ಎಸ್‌. ಯಡಿಯೂರಪ್ಪ, ಅವರ ಮಗ ಹಾಗೂ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ, ಅವರ ಮಗ ಶಶಿಧರ ಮರಡಿ, ವಿರೂಪಾಕ್ಷಪ್ಪ ಅವರ ಅಳಿಯ ಸಂಜಯ್ ಶ್ರೀ, ಗುತ್ತಿಗೆದಾರ ಚಂದ್ರಕಾಂತ್‌ ರಾಮಲಿಂಗಂ, ಐಎಎಸ್‌ ಅಧಿಕಾರಿ ಡಾ.ಜಿ.ಸಿ. ಪ್ರಕಾಶ್‌ ಮತ್ತು 37 ಕ್ರೆಸೆಂಟ್‌ ಹೋಟೆಲ್‌ ಮಾಲೀಕ ಕೆ.ರವಿ ಇತರ ಆರೋಪಿಗಳು. ಈ ಎಲ್ಲರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು ಪೂರ್ವ ತಾಲ್ಲೂಕಿನ ಕೋನದಾಸನಪುರದಲ್ಲಿ ಬಿಡಿಎ ನಿರ್ಮಿಸುತ್ತಿರುವ ಬಹುಮಹಡಿ ವಸತಿ ಸಮುಚ್ಚಯದ ಕಾಮಗಾರಿಯ ಗುತ್ತಿಗೆ ಸಂಬಂಧ ಚಂದ್ರಕಾಂತ್‌ ರಾಮಲಿಂಗಂ ಅವರಿಂದ ಇತರ ಆರೋಪಿಗಳು ಒಟ್ಟು ₹ 29.5 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಆ್ಯಂಟಿ ಗ್ರಾಫ್ಟ್‌ ಮತ್ತು ಪರಿಸರ ವೇದಿಕೆ ಅಧ್ಯಕ್ಷ ಟಿ.ಜೆ. ಅಬ್ರಹಾಂ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿತ್ತು.

ನ್ಯಾಯಾಲಯದ ಆದೇಶದಂತೆ ಎಫ್‌ಐಆರ್‌ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಪ್ರಕರಣದಲ್ಲಿ ಯಡಿಯೂರಪ್ಪ ಮೊದಲನೇ, ವಿಜಯೇಂದ್ರ ಎರಡನೇ ಆರೋಪಿಗಳಾಗಿದ್ದರೆ, ಸೋಮಶೇಖರ್‌ ಆರನೇ ಆರೋಪಿಯಾಗಿದ್ದಾರೆ.

ಟೆಂಡರ್ ಅಕ್ರಮದ ಆರೋಪ

₹ 567 ಕೋಟಿ ವೆಚ್ಚದಲ್ಲಿ ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಬಿಡಿಎ 2017ರ ಅಕ್ಟೋಬರ್‌ನಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭಿಸಿತ್ತು. ಆಗ ₹ 675 ಕೋಟಿ ಮೊತ್ತಕ್ಕೆ ಚಂದ್ರಕಾಂತ್‌ ರಾಮಲಿಂಗಂ ಒಡೆತನದ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ಬಿಡ್‌ ಸಲ್ಲಿಸಿತ್ತು. ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಡಿಎ ಅಧ್ಯಕ್ಷರಾಗಿದ್ದ ಸೋಮಶೇಖರ್‌, ತಮ್ಮ ಪ್ರಭಾವ ಬಳಸಿ ₹ 666.22 ಕೋಟಿ ಮೊತ್ತಕ್ಕೆ ಟೆಂಡರ್‌ ಅಂತಿಮಗೊಳಿಸಿ, ಕಾರ್ಯಾದೇಶ ನೀಡಿರುವ ಆರೋಪ ದೂರಿನಲ್ಲಿದೆ.

ನಂತರದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಅವರ ಮಗ ವಿಜಯೇಂದ್ರ, ಅವರ ಸಂಬಂಧಿಗಳು ಮತ್ತು ಐಎಎಸ್‌ ಅಧಿಕಾರಿ ಜಿ.ಸಿ. ಪ್ರಕಾಶ್‌, ಗುತ್ತಿಗೆ ಮುಂದುವರಿಸಲು ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ. ಕೋಲ್ಕತ್ತ ವಿಳಾಸದಲ್ಲಿ ನೋಂದಣಿಯಾಗಿರುವ ಏಳು ‘ಶೆಲ್‌’ (ನಕಲಿ) ಕಂಪನಿಗಳ ಖಾತೆಗಳಿಂದ ಶಶಿಧರ ಮರಡಿ ಹಾಗೂ ಸಂಜಯ್‌ ಶ್ರೀ ಪಾಲುದಾರರಾಗಿರುವ ಬೆಲ್‌ಗ್ರಾವಿಯ ಎಂಟರ್‌ಪ್ರೈಸಸ್‌ ಮತ್ತು ಎಸ್‌ವಿಎಸ್‌ ಸ್ಟೇಟ್ಸ್‌ ಎಂಬ ಕಂಪನಿಗಳಿಗೆ ₹ 5.01 ಕೋಟಿ ವರ್ಗಾವಣೆಯಾಗಿರುವುದೂ ತನಿಖೆಯ ಭಾಗವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.