ADVERTISEMENT

ರಾಹುಲ್‌ ಗಾಂಧಿಗೆ ಅವಹೇಳನ ಆರೋಪ: ಬಿಜೆಪಿಯ ಅಮಿತ್‌ ಮಾಳವೀಯ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 16:00 IST
Last Updated 28 ಜೂನ್ 2023, 16:00 IST
ಬಿಜೆಪಿ ನಾಯಕ ಅಮಿತ್ ಮಾಳವೀಯ
ಬಿಜೆಪಿ ನಾಯಕ ಅಮಿತ್ ಮಾಳವೀಯ   

ಬೆಂಗಳೂರು: ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ವಿಡಿಯೊ ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್‌ ಉಸ್ತುವಾರಿ ಅಮಿತ್‌ ಮಾಳವೀಯ ವಿರುದ್ಧ ನಗರದ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಕಾಂಗ್ರೆಸ್ ದೇಶದ್ರೋಹಿ ಎಂದು ಹೇಳಿ ಮಾಳವೀಯ ಅವರು ವಿಡಿಯೊ ಪೋಸ್ಟ್‌ ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೆಪಿಸಿಸಿ ಸದಸ್ಯ ರಮೇಶ್ ಬಾಬು ದೂರು ನೀಡಿದ್ದರು.

‘ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಅಮಿತ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುವುದು. ಅಮಿತ್‌ ಅವರು ಜೂನ್‌ 17ರಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಅನಿಮೇಟೆಡ್‌ ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ರಾಹುಲ್‌ ಗಾಂಧಿ ಅವರು ವಿದೇಶದಲ್ಲಿ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಾರೆ. ರಾಹುಲ್‌ ಹಾಗೂ ಕಾಂಗ್ರೆಸ್‌ ಪಕ್ಷವು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ ಎನ್ನುವ ರೀತಿಯಲ್ಲಿ ವಿಡಿಯೊದಲ್ಲಿ ಹೇಳಲಾಗಿದೆ. ಇದು ಸಮಾಜವನ್ನು ಪ್ರಚೋದನೆಗೊಳಿಸುತ್ತದೆ’ ಎಂದು ರಮೇಶ್‌ ಬಾಬು ದೂರಿನಲ್ಲಿ ಉಲ್ಲೇಖಿಸಿದ್ದರು.

‘ಇಸ್ಲಾಮಿಕ್ ನಂಬಿಕೆಯ ಜನರೊಂದಿಗೆ ರಾಹುಲ್‌ ಗಾಂಧಿ ಅವರು ನಡೆಸಿದ್ದ ಸಂವಾದದ ಅನಿಮೇಷನ್ ಅನ್ನು ತಪ್ಪಾಗಿ ನಿರೂಪಿಸಲಾಗಿದೆ. ಇದು ಜನರ ನಡುವೆ ದ್ವೇಷ ಉಂಟು ಮಾಡುವ ಸಾಧ್ಯತೆ ಇದೆ. ಕೋಮು ಸೌಹಾರ್ದತೆ ಹಾಳು ಮಾಡಲಿದೆ’ ಎಂದು ತಿಳಿಸಿದ್ದರು.

‘ಸರ್ಕಾರ್‌’ (2005) ಚಿತ್ರದ ಗೋವಿಂದ ಹಾಡು ವಿರೂಪಗೊಳಿಸಲಾಗಿದೆ. ಸಾಹಿತ್ಯವನ್ನು ತೊಡುಂಗಾ (ನಾನು ಮುರಿಯುತ್ತೇನೆ) ಎಂದು ಬದಲಾವಣೆ ಮಾಡಲಾಗಿದೆ. ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಧಕ್ಕೆ ತರುವ ರೀತಿಯಲ್ಲಿ ಬಿಂಬಿಸಲಾಗಿದೆ. ಸಮಾಜಕ್ಕೆ ತಪ್ಪು ಮಾಹಿತಿ ಹರಡುವ ಹಾಗೂ ದ್ವೇಷ ಸೃಷ್ಟಿಸಲು ಒಳಸಂಚು ಮಾಡಿರುವ ಅಮಿತ್‌ ಮತ್ತಿತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.