ADVERTISEMENT

ಇನ್ನೊಂದು ಅನಾಹುತ ಆಗುವ ಮೊದಲು ಎಚ್ಚೆತ್ತುಕೊಳ್ಳಿ: ಅಗ್ನಿಶಾಮಕದಳದ ಸ್ಥಿತಿ ಹೀಗಿದೆ

ಉಮಾಶಂಕರ ಕಾರ್ಯ
Published 17 ಸೆಪ್ಟೆಂಬರ್ 2019, 9:28 IST
Last Updated 17 ಸೆಪ್ಟೆಂಬರ್ 2019, 9:28 IST
   

ಬೆಂಗಳೂರು:ಪ್ರವಾಹದ ನೆನಪು ನಮ್ಮ ಎದೆಯಲ್ಲಿ ಇನ್ನೂ ಹಸಿಹಸಿ. ಮಲೆನಾಡು, ಕರಾವಳಿಯಲ್ಲಿ ಸೊಕ್ಕಿದ್ದ ಮುಂಗಾರು ಮಳೆ ಹಾಗೂ ಮಹಾರಾಷ್ಟ್ರದಿಂದ ಮೈದುಂಬಿ ಬಂದ ಕೃಷ್ಣಾ ನದಿ ಸಾವಿರಾರು ಜನರ ಬದುಕಿನ ಮೇಲೆ ಅಳಿಸಲಾಗದ ನೆನಪು ಉಳಿಸಿದೆ.ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ಹಲವೆಡೆ ಭಾರಿ ಪ್ರಮಾಣದ ಅನಾಹುತಗಳು ಸಂಭವಿಸಿದವು. 54 ಮಂದಿ ಪ್ರಾಣ ಕಳೆದುಕೊಂಡರು.

ಇದಕ್ಕೆ ವರುಣನ ಪ್ರತಾಪದ ಜೊತೆಗೆ ನಮ್ಮದೇ ಸರ್ಕಾರ ಅಗ್ನಿಶಾಮಕದಳ ಇಲಾಖೆಯತ್ತ ಹೊಂದಿರುವ ನಿರ್ಲಕ್ಷ್ಯ ಧೋರಣೆಯೂ ಮುಖ್ಯ ಕಾರಣ. ಅಗ್ನಿಶಾಮಕದಳ ಇಲಾಖೆಯು ಮುಳುಗುತಜ್ಞರು ಹಾಗೂ ತುರ್ತು ಸಂದರ್ಭದಲ್ಲಿ ಉಪಯೋಗಿಸುವ ಅಗತ್ಯ ಸೌಲಭ್ಯಗಳನ್ನು ಹೊಂದಿಲ್ಲ. ಇಲಾಖೆ ಸದೃಢವಾಗಿದ್ದರೆ ಈ ಪ್ರಮಾಣದಲ್ಲಿ ಸಾವುನೋವು, ನಷ್ಟ ಸಂಭವಿಸುತ್ತಿರಲಿಲ್ಲ ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ADVERTISEMENT

ದೋಣಿ–ಮುಳುಗುತಜ್ಞರು ಇಲ್ಲ

ಅಗ್ನಿಶಾಮಕದಳ ಬಗ್ಗೆ ಸರ್ಕಾರಕ್ಕೆ ಏಕಿಷ್ಟು ಅವಜ್ಞೆ? ಇನ್ನಾದರೂ ಈ ಧೋರಣೆ ಬದಲಾದೀತೆ? ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಮುಂದಿನ ಸಾಲುಗಳನ್ನು ನೋಡಿ.

ಪ್ರವಾಹ ಸಂದರ್ಭದಲ್ಲಿ ಹಲವು ಪ್ರಾಣಹಾನಿ ಸಂಭವಿಸಿವೆ. ಈ ಸಂದರ್ಭದಲ್ಲಿಯೂಅಗ್ನಿಶಾಮಕದಳದ ಸಿಬ್ಬಂದಿ ಜಿಲ್ಲೆಗೆ ಒಂದರಂತೆ ನೀಡಿರುವ ಮೀಡಿಯಂ ಬೋಟ್ (ಕಾಲಿನಿಂದ ಪೆಡಲ್ ಮಾಡಿ ಮುಂದೆ ಸಾಗುವ ದೋಣಿ) ಉಪಯೋಗಿಸಿ ಸಾಧ್ಯವಾದಷ್ಟು ಜನರನ್ನು ರಕ್ಷಣೆ ಮಾಡಿದ್ದಾರೆ. ಪೆಡಲ್ ಮಾಡಿಕೊಂಡು ಚಾಲನೆ ಮಾಡುವ ದೋಣಿಯಲ್ಲಿ ಸಿಬ್ಬಂದಿ ತಾವು ಕೂರದೆ, ನೀರಿನಲ್ಲಿಯೇ ನಡೆದು ಜನರನ್ನು ಮಾತ್ರ ದೋಣಿಯಲ್ಲಿ ಕೂರಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ.

ಪ್ರವಾಹದಿಂದ ಹೆಚ್ಚಿನ ನೀರು ನದಿಗೆ ಹರಿದು ಬರುವ ಸಂದರ್ಭಗಳಲ್ಲಿ ನೆರವಿಗೆ ಧಾವಿಸುವ ಅಥವಾ ನದಿಯಲ್ಲಿ ಮುಳುಗಿ ಯಾವುದೇ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ನೈಪುಣ್ಯತೆ ಹೊಂದಿರುವ ಮುಳುಗು ತಜ್ಞರನ್ನು ರಾಜ್ಯ ಅಗ್ನಿಶಾಮಕದಳ ಇಲಾಖೆ ಹೊಂದಿಲ್ಲ. ಹಲವು ಸಂದರ್ಭಗಳಲ್ಲಿ ಮುಳುಗು ತಜ್ಞರ ಅಗತ್ಯಬಿದ್ದರೂ ರಾಜ್ಯಸರ್ಕಾರ ಮಾತ್ರ ಈ ವಿಷಯದತ್ತ ಗಮನ ಹರಿಸಿಲ್ಲ.

ನೈಸರ್ಗಿಕ ವಿಕೋಪಗಳು, ಭೂಕುಸಿತ, ಸ್ಫೋಟದಂತಹ ಘಟನೆಗಳು ಸಂಭವಿಸಿದಾಗ ತುರ್ತಾಗಿ ಧಾವಿಸುವ ಇಲಾಖೆ ಹೆಚ್ಚಿನ ಸಿಬ್ಬಂದಿಯ ನೆರವು ಬೇಕಾದಲ್ಲಿ ಕೇಂದ್ರದ ಎನ್‌ಡಿಆರ್‌ಎಫ್ ತಂಡವನ್ನೇ ಆಶ್ರಯಿಸಬೇಕಾಗಿದೆ. ಬೇರೆ ಕಡೆಯಿಂದ ತಜ್ಞರ ತಂಡ ಆಗಮಿಸುವಷ್ಟರಲ್ಲಿ ಎಷ್ಟೋ ಪ್ರಾಣಹಾನಿಗಳು ಸಂಭವಿಸಿದ ನಿದರ್ಶನಗಳಿವೆ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇರುವಷ್ಟು ಸಿಬ್ಬಂದಿಯನ್ನೇ ನಿಯೋಜಿಸಿ ಪರಿಸ್ಥಿತಿ ನಿಭಾಯಿಸಿ ಎನ್ನುತ್ತಾರೆ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಮಾನದಂಡದಿಂದ ಬಲುದೂರ

ಐಎಫ್‌ಎಸ್‌ಎಸ್‌ಸಿ (ಇಂಟರ್‌ನ್ಯಾಷನಲ್ ಫೈರ್ ಸೇಫ್ಟಿ ಸ್ಟಾಂಡರ್ಡ್‌ ಕೋಅಲಿಷನ್)ಮಾನದಂಡದ ಪ್ರಕಾರ, 50 ಸಾವಿರ ಜನಸಂಖ್ಯೆಗೆ ಒಂದು ಅಗ್ನಿಶಾಮಕ ಠಾಣೆ ಇರಬೇಕು. ಆ ಠಾಣೆಯಲ್ಲಿ ಒಂದು ರಕ್ಷಣಾ ವಾಹನ (ರೆಸ್ಕ್ಯೂ ವ್ಯಾನ್ ) ಇರಬೇಕು. 10 ರಿಂದ 12 ಮಂದಿಯನ್ನು ಸಾಗಿಸುವ ಸಾಮರ್ಥ್ಯ ಹೊಂದಿದ ಮೋಟಾರ್ ಚಾಲಿತ ಬೋಟ್ , ಸಿಮೆಂಟ್ ಕಟರ್, ಡ್ರಿಲ್ಲಿಂಗ್ ಯಂತ್ರ, ಮರಕತ್ತರಿಸುವ ಯಂತ್ರ (ಪೆಟ್ರೋಲ್ ಚಾಲಿತ), ಹೈಡ್ರಾಲಿಕ್ ಆಪರೇಟರ್ ಯಂತ್ರ, ಗಾಳಿ ಚೀಲಗಳು, ಸುತ್ತಿಗೆ, ಪಿಕಾಸಿ, ಗುದ್ದಲಿ, ಸರಪಳಿ, ಹಗ್ಗ ಇರಬೇಕು. ಅಲ್ಲದೆ, ನದಿ ಪಾತ್ರದಲ್ಲಿ ಸ್ಥಾಪಿಸಲಾಗುವ ಅಗ್ನಿಶಾಮಕ ಠಾಣೆಗಳಲ್ಲಿ ಮುಳುಗುತಜ್ಞರು ಇರಲೇಬೇಕು.

ಆದರೆ, ಬೆಂಗಳೂರನ್ನು ಹೊರತುಪಡಿಸಿ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿಯೂ ಮೋಟಾರ್ ಚಾಲಿತ ದೋಣಿ ಇಲ್ಲ. ಬದಲಿಗೆ ಎಂಆರ್‌ವಿ (ಮೀಡಿಯಂ ರೆಸ್ಕ್ಯೂ ವ್ಯಾನ್ ) ವಾಹನವನ್ನು ಜಿಲ್ಲೆಗೆ ಒಂದರಂತೆ ನೀಡಲಾಗಿದೆ. ಈ ವಾಹನದಲ್ಲಿ ಕಾಲಿನಿಂದ ಪೆಡಲ್ ಮಾಡಿಕೊಂಡು ಹೋಗುವ ಒಂದು ದೋಣಿ (ಈ ದೋಣಿಯಲ್ಲಿ ಕೇವಲ 6 ಮಂದಿ ಮಾತ್ರ ಪ್ರಯಾಣಿಸಬಹುದು). ಉಳಿದಂತೆ ಕಾಂಕ್ರೀಟ್ ಕಟರ್, ಹೈಡ್ರಾಲಿಕ್ ಅಪರೇಟರ್ ಯಂತ್ರ ಸೇರಿದಂತೆ ಉಳಿದ ಎಲ್ಲಾ ಸಾಮಾನುಗಳು ಇರುತ್ತವೆ. ಆದರೆ, ಪ್ರವಾಹ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದು ಹಗ್ಗ ಮತ್ತು ಮೋಟಾರ್ ಚಾಲಿತ ದೋಣಿ ಮಾತ್ರ. ಮೀಡಿಯಂ ರೆಸ್ಯ್ಕೂವ್ಯಾನ್‌ನಲ್ಲಿ ಮೋಟಾರ್ ಚಾಲಿತ ದೋಣಿಯೇ ಇಲ್ಲ.

ಪ್ರವಾಹ ಸಂದರ್ಭಗಳಲ್ಲಿ ರಾಜಕಾರಣಿಗಳು ಮಾತ್ರ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡುವ ನಾಟಕವಾಡಿ ಸಮಾಧಾನ ಹೇಳಿ ವಾಪಸಾಗುತ್ತಾರೆಯೇ ವಿನಃ ಅಗತ್ಯವಾದ ತಜ್ಞರ ತಂಡ ಹಾಗೂ ಸುಸಜ್ಜಿತ ರಕ್ಷಣಾ ವಾಹನವನ್ನು ಅಗ್ನಿಶಾಮಕದಳ ಇಲಾಖೆಗೆ ನೀಡಲು ರಾಜ್ಯ ಸರ್ಕಾರಕ್ಕಾಗಲಿ, ಕೇಂದ್ರಕ್ಕಾಗಲಿ ಒತ್ತಾಯಿಸುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ಅಗತ್ಯ ಸಿಬ್ಬಂದಿಯೇ ಇಲ್ಲ

ಅಗ್ನಿಶಾಮಕ ಇಲಾಖೆ ಒಟ್ಟು7028 ಸಿಬ್ಬಂದಿಯನ್ನು ಹೊಂದಿರಬಹುದು ಆರ್ಥಿಕ ಇಲಾಖೆ ಸೂಚಿಸಿದೆ. ಈಗ ಇಲಾಖೆಯಲ್ಲಿ ಇರುವುದು ಕೇವಲ 4640 ಮಂದಿ ಮಾತ್ರ. ಉಳಿದ 2388 ಮಂದಿಯ ಪೈಕಿ 2017-18ರ ಸಾಲಿನಲ್ಲಿ 833 ಮಂದಿಯನ್ನು ನೇಮಕ ಮಾಡಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ. ನೇಮಕಾತಿ ಪ್ರಕ್ರಿಯೆಗಾಗಿ ಸಿಐಡಿ ವಿಭಾಗದ ಸಿಬ್ಬಂದಿ ನೇಮಕಾತಿ ಮತ್ತು ತರಬೇತಿ ವಿಭಾಗಕ್ಕೆ ಸೂಚಿಸಲಾಗಿದೆ. ಆ ಕಡತ ಇನ್ನೂ ಅಲ್ಲಿಯೇ ಕೊಳೆಯುತ್ತಿದೆ.

ಈಗ ಇಲಾಖೆಯಲ್ಲಿ ಡಿಜಿಪಿ ಎಂ.ಎನ್.ರೆಡ್ಡಿ ಹಾಗೂ ಎಡಿಜಿಪಿ ಸುನಿಲ್ ಅಗರ್‌ವಾಲ್ ಹಾಗೂ4640 ಸಿಬ್ಬಂದಿ ಮಾತ್ರ ಇಡೀ ರಾಜ್ಯಕ್ಕೆ ಆಪದ್ಭಾಂಧವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಜನಸಂಖ್ಯೆ 6 ಕೋಟಿ ದಾಟಿದ್ದರೂ ಅಗ್ನಿಶಾಮಕದಳದ ಸಿಬ್ಬಂದಿ ಸಂಖ್ಯೆ ಮಾತ್ರ ಏರಿಕೆಯಾಗಿಲ್ಲ.

‘ಮುಳುಗು ತಜ್ಞರನ್ನು ಹೊಂದಿರಬೇಕು, ಆದರೆ, ನಮ್ಮಲ್ಲಿರುವ ಸಿಬ್ಬಂದಿಗೆ ತರಬೇತಿ ಸಮಯದಲ್ಲಿಯೇ ಈಜುವುದನ್ನು ಕಲಿಸುತ್ತೇವೆ. ಪ್ರವಾಹದಂತಹ ಸಂದರ್ಭಗಳಲ್ಲಿ ಈಜಿ ಜನರನ್ನು ರಕ್ಷಿಸುವ ನೈಪುಣ್ಯತೆ ಅವರಲ್ಲಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಎನ್‌ಡಿಆರ್‌ಎಫ್‌ ತಂಡವನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ಇದೆ‘ ಎನ್ನುತ್ತಾರೆರಾಜ್ಯ ಅಗ್ನಿಶಾಮಕದಳ ಹಾಗೂ ಗೃಹ ರಕ್ಷಕ ದಳ ಇಲಾಖೆಯ ನಿರ್ದೇಶಕರಾದ ಶಿವಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.