ಸಿಂದಗಿ: ತಾಲ್ಲೂಕಿನ ಗೋಲಗೇರಿ ಗ್ರಾಮದ ಹೊರವಲಯದಲ್ಲಿನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರ ಕಂಚಿನ ಪ್ರತಿಮೆಗೆ ಕಿಡಿಗೇಡಿಗಳು ಗುರುವಾರ ಬೆಂಕಿ ಹಚ್ಚಿದ್ದಾರೆ. ಪ್ರತಿಮೆಗಳ ಕೊರಳಲ್ಲಿ ಟಯರ್ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಅವು ವಿರೂಪಗೊಂಡಿವೆ.
ಈ ಸುದ್ದಿ ಹರಡುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮನಗೂಳಿ ಅಭಿಮಾನಿಗಳು ಪ್ರತಿಮೆ ಬಳಿ ಜಮಾಯಿಸಿದರು. ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಅವರು, ಆರೋಪಿಗಳನ್ನು ಬಂಧಿಸಿ ಶಿಕ್ಷಿಸುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಬಂದ ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರು ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ‘ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸುತ್ತೇವೆ’ ಎಂದು ಎಸ್ಪಿ ಪ್ರಕಾಶ ಅಮೃತ ನಿಕ್ಕಂ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಿದರು.
ಮನಗೂಳಿ ಅಭಿಮಾನಿಗಳು ಪ್ರತಿಮೆಗಳಿಗೆ ಕ್ಷೀರಾಭಿಷೇಕ ಮಾಡಿ ಸ್ವಚ್ಛಗೊಳಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಆಲಮೇಲ, ಸಿಂದಗಿ ಪಟ್ಟಣಗಳಲ್ಲಿ ಮನಗೂಳಿ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನದ ರೂವಾರಿಗಳಾಗಿದ್ದ ದೇವೇಗೌಡ- ಮನಗೂಳಿ ಅವರ ಹೋರಾಟದ ನೆನಪಿಗಾಗಿ ರೈತರೇ ₹75 ಲಕ್ಷ ಸಂಗ್ರಹಿಸಿ ಪ್ರತಿಮೆ ಸ್ಥಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.