ADVERTISEMENT

ಅಗ್ನಿಶಾಮಕ ದಳ ಇಲಾಖೆಗೆ ₹ 20 ಕೋಟಿ ನೀಡಲು ಕಂದಾಯ ಇಲಾಖೆ ಒಪ್ಪಿಗೆ

ಜೀವ ರಕ್ಷಕ ದೋಣಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಅಗ್ನಿಶಾಮಕದಳ ಹಿಂದೇಟು

ಉಮಾಶಂಕರ ಕಾರ್ಯ
Published 21 ಸೆಪ್ಟೆಂಬರ್ 2019, 11:49 IST
Last Updated 21 ಸೆಪ್ಟೆಂಬರ್ 2019, 11:49 IST
   

ಬೆಂಗಳೂರು:ನೆರೆ, ಪ್ರವಾಹ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಹರಿಯುವ ನೀರಿನಲ್ಲಿಯೂ ಇಳಿಸಿ ಜನರ ಪ್ರಾಣ ಉಳಿಸಲು ನೆರವಾಗುವ ಜೀವ ರಕ್ಷಕ ದೋಣಿ (ಅತ್ಯಾಧುನಿಕ ಪೆಟ್ರೋಲ್ ಮೋಟರ್ ಚಾಲಿತ)ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಅಗ್ನಿಶಾಮಕದಳ ಹಿಂದೇಟು ಹಾಕುತ್ತಿದೆ.

ಪ್ರವಾಹದಲ್ಲಿ ರಕ್ಷಣಾ ಕಾರ್ಯ, ಕಟ್ಟಡ ದುರಂತ ಸಂದರ್ಭದಲ್ಲಿ ಸಾರ್ವಜನಿಕರ ಪ್ರಾಣ, ಆಸ್ತಿ ಪಾಸ್ತಿ ರಕ್ಷಣೆಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಅನುದಾನ ಬಿಡುಗಡೆ ಮಾಡಬೇಕೆಂದು ಅಗ್ನಿಶಾಮಕದಳ 06-06-2019ರಂದು ಪ್ರಸ್ತಾವನೆ ಕಳುಹಿಸಿದೆ. ಈ ಪ್ರಸ್ತಾವನೆಯಲ್ಲಿ ಉಪಕರಣಗಳ ಜೊತೆ ಕೇವಲ 8 ಜೀವ ರಕ್ಷಕ ದೋಣಿಗಳನ್ನು ಮಾತ್ರ ಖರೀದಿಸುವುದಾಗಿ ತಿಳಿಸಿದೆ.

ಪ್ರಸ್ತಾವನೆ ಪರಿಶೀಲಿಸಿದ ನಂತರ ಉಪಕರಣಗಳನ್ನು ಖರೀದಿಸಲು ರಾಜ್ಯ ವಿಕೋಪ ನಿರ್ವಹಣಾ ನಿಧಿಯಿಂದ₹20 ಕೋಟಿಯನ್ನು ಕಂದಾಯ ಇಲಾಖೆ ಎರಡು ದಿನಗಳ ಹಿಂದಷ್ಟೇಮಂಜೂರು ಮಾಡಿದೆ. ಈ ಹಣದಲ್ಲಿ 8 ಜೀವ ರಕ್ಷಕ ದೋಣಿಗಳನ್ನು ಮಾತ್ರ ಖರೀದಿಸಲು ಇಲಾಖೆ ಸಿದ್ದತೆ ನಡೆಸಿದೆ.

ADVERTISEMENT

ಹೆಚ್ಚಿನ ಸಂಖ್ಯೆಯ ಮೋಟಾರ್ ಬೋಟ್ ಅಗತ್ಯವಿಲ್ಲವೇ?

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪ್ರಮುಖವಾಗಿ ಎಲ್ಲಾ ಜಿಲ್ಲೆಗಳಿಗೆ ಅಲ್ಲದಿದ್ದರೂ ಕಳೆದ 2018 ಹಾಗೂ 2019ರಲ್ಲಿ ಪ್ರವಾಹದಿಂದ ಸಾವು ನೋವು ಅನುಭವಿಸಿದ ಜಿಲ್ಲೆಗಳಲ್ಲಿರುವ ಅಗ್ನಿಶಾಮಕ ಠಾಣೆಗಳಿಗೆ ಪೆಟ್ರೋಲ್ ಚಾಲಿತ ಬೋಟ್‌ಗಳನ್ನು ಖರೀದಿಸುವ ಅಗತ್ಯವಿದೆ.

ಆದರೆ, ಅಧಿಕಾರಿಗಳು ಇದಕ್ಕೆ ನೀಡುವ ವಿವರಣೆಯೇ ಬೇರೆ, ಪೆಟ್ರೋಲ್ ಚಾಲಿತ ಬೋಟ್‌‌ ನಿರ್ವಹಣೆಗೆ 12 ಮಂದಿ ಸಿಬ್ಬಂದಿ ಬೇಕು. ಇವರು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಬೇಕು. ಇಷ್ಟಾದರೂ ಇದು ಉಪಯೋಗಕ್ಕೆ ಬರುವುದು ಕೇವಲ ಪ್ರವಾಹ ಸಂದರ್ಭದಲ್ಲಿ ಮಾತ್ರ. ಪ್ರವಾಹ ಇಲ್ಲದಿದ್ದರೆ, ಬೋಟ್ ಹಾಗೂ ಸಿಬ್ಬಂದಿ ವರ್ಷವಿಡೀ ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಗಬಹುದು. ಇದು ಇಲಾಖೆಗೆ ನಷ್ಟ ಉಂಟು ಮಾಡುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ಲಾಭ ನಷ್ಟ ಲೆಕ್ಕಾಚಾರ ಹೊರತುಪಡಿಸಿ, ಜನರ ಪ್ರಾಣಕ್ಕೆ ಬೆಲೆ ಇಲ್ಲವೆ ಎಂಬ ಪ್ರಶ್ನೆ ಕೇಳಿದರೆ, ಅಂತಹ ದುರಂತಗಳೇನಾದರೂ ಸಂಭವಿಸಿದರೆ ಎನ್‌ಡಿಆರ್‌ಎಫ್ ತುಕಡಿ(ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ)ಯನ್ನು ಕರೆಸಿಕೊಳ್ಳುತ್ತೇವೆ ಎನ್ನುತ್ತಾರೆ. ರಾಜ್ಯದ ಕೃಷ್ಣಾ, ಕಾವೇರಿ, ಭೀಮಾ, ತುಂಗಭದ್ರಾ ನದಿಗಳು ಸೇರಿದಂತೆ ಪ್ರಮುಖ ನದಿಗಳ ಜಲಾನಯನ ಪ್ರದೇಶಗಳಲ್ಲಿ, ಕಡಲ ತೀರಗಳಲ್ಲಿ ದುರಂತಗಳು ಸಂಭವಿಸಿದರೆ, ಎನ್‌ಡಿಆರ್‌ಎಫ್ ಸಿಬ್ಬಂದಿ ಬರುವುದಕ್ಕಿಂತ ಮುಂಚಿತವಾಗಿ ಅಗ್ನಿಶಾಮಕದಳದ ಸಿಬ್ಬಂದಿಯೇ ಸ್ಥಳದಲ್ಲಿದ್ದರೆ ಪ್ರಾಣ ಹಾನಿಯಾಗುವುದನ್ನು ತಪ್ಪಿಸಬಹುದು ಎಂದರೂ ಹಿರಿಯ ಅಧಿಕಾರಿಗಳು ಮಾತ್ರ ಇದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎನ್ನುತ್ತಾರೆ ಇಲಾಖೆಯ ಸಿಬ್ಬಂದಿ.

ಹಣ ಬಂದ ನಂತರ ಮುಂದಿನ ಕ್ರಮ

ಇಲಾಖೆಗೆ ಹಣ ಬರುತ್ತದೆ. ಈ ಸಂಬಂಧ ಪತ್ರ ವ್ಯವಹಾರ ಮುಗಿಸಿಕೊಂಡು ಮಂಜೂರಾದ ಹಣವನ್ನು ಬಳಸಬೇಕಾದರೆ, ಷರತ್ತು ವಿಧಿಸಿರುವಂತೆ ಸಚಿವ ಸಂಪುಟ ಒಪ್ಪಿಗೆ ಕೊಡಬೇಕು. ಉನ್ನತ ಮಟ್ಟದ ಸಮಿತಿ ಮುಂದೆ ಖರೀದಿಸುವ ಉಪಕರಣಗಳ ಪಟ್ಟಿ ಮಂಡಿಸಬೇಕು. ಆ ನಂತರ ಸಮಿತಿ ಒಪ್ಪಿಗೆ ಸೂಚಿಸಬೇಕು. ತದ ನಂತರವೇ ಉಪಕರಣಗಳ ಖರೀದಿಸಲಾಗುತ್ತದೆ ಎಂದು ಅಗ್ನಿಶಾಮಕದಳದ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸುನಿಲ್ ಅಗರವಾಲ್ 'ಪ್ರಜಾವಾಣಿ' ತಿಳಿಸಿದ್ದಾರೆ.

ಈಗಾಗಲೆ ಅಗ್ನಿಶಾಮಕ ಇಲಾಖೆ ಡಿಜಿಪಿ ಒಳಾಡಳಿತ ಇಲಾಖೆ ಕಾರ್ಯದರ್ಶಿಗೆ 06-06-2019ರಲ್ಲಿ ಪ್ರಸ್ತಾವನೆ ಕಳುಹಿಸಿದ್ದಾರೆ. ಒಳಾಡಳಿತ ಇಲಾಖೆ ಈ ಪತ್ರವನ್ನು ಕಂದಾಯ ಇಲಾಖೆಗೆ ಕಳುಹಿಸಿಕೊಟ್ಟಿದೆ. ಕಂದಾಯ ಇಲಾಖೆ 17-09-2019ರಂದು ಮಂಜೂರಾತಿ ನೀಡಿರುವುದಾಗಿ ಕಡತದ ಕುರಿತು ಮುಂದಿನ ಕ್ರಮಕ್ಕಾಗಿ ಒಳಾಡಳಿತ ಇಲಾಖೆಗೆ ಕಳುಹಿಸಿದೆ.

ಇದು ಅಧಿಕ ಮೊತ್ತದ ಹಣವಾಗಿದ್ದು, ಕಂದಾಯ ಇಲಾಖೆ ಹಲವು ಷರತ್ತುಗಳನ್ನು ಪಾಲಿಸಬೇಕೆಂದು ತಿಳಿಸಿದೆ. ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಕಾಯ್ದೆ 1999ರ (ಕೆಟಿಪಿಪಿ ಆಕ್ಟ್) ಅನ್ವಯ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕು. ಆರ್ಥಿಕ ಇಲಾಖೆಯ ಅಭಿಪ್ರಾಯದಂತೆ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕು. ಸದರಿ ಉಪಕರಣಗಳ ಖರೀದಿಯನ್ನು ಉನ್ನತ ಮಟ್ಟದ ಸಮಿತಿಯ ಅನುಮೋದನೆ ಪಡೆದು ಉತ್ತಮ ಗುಣಮಟ್ಟದ ಉಪಕರಣಗಳನ್ನು ಖರೀದಿಸಬೇಕು ಎಂದು ತಿಳಿಸಿದೆ.

ಅಗ್ನಿಶಾಮಕದಳ ಇಲಾಖೆ ಡಿಜಿಪಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಪ್ರವಾಹ ರಕ್ಷಣಾ ಕಾರ್ಯ, ಭೂ ಕುಸಿತ, ಕಟ್ಟಡ ಕುಸಿತ ದುರಂತ, ಹೆಚ್ಚಿನ ಮಳೆಯಿಂದಾಗಿ ಮರಗಳು ಬಿದ್ದ ಸಂದರ್ಭದಲ್ಲಿ, ರಸ್ತೆ ಅಪಘಾತ, ರೈಲು ದುರಂತ ಹಾಗೂ ಇತರೆ ಯಾವುದೇ ಜೀವ ರಕ್ಷಣೆ, ಆಸ್ತಿ, ಪಾಸ್ತಿ ರಕ್ಷಣೆ ಮಾಡಲು ಅಗತ್ಯವಾಗಿಬೇಕಾದ ವಿವಿಧ ಮಾದರಿಯ ಆಧುನಿಕ ರಕ್ಷಣಾ ಉಪಕರಣಗಳನ್ನು ಖರೀದಿಸಬೇಕಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.