ಬೆಂಗಳೂರು: ಸ್ಥಳೀಯ ಅಗ್ನಿಶಾಮಕ ಠಾಣಾಧಿಕಾರಿಗಳು ಪರಿಶೀಲಿಸಿ ಸಲ್ಲಿಸಿದ ವರದಿಯನ್ನು ಆಧರಿಸಿ ಸಂಬಂಧಪಟ್ಟ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಖಾಸಗಿ, ಅನುದಾನಿತ, ಅನುದಾನರಹಿತ ಶಾಲಾ ಕಟ್ಟಡಗಳಿಗೆ ಅಗ್ನಿ ಅವಘಡ ಸುರಕ್ಷತೆ ಪ್ರಮಾಣಪತ್ರ ನೀಡಬಹುದೆಂಬ ಆದೇಶವನ್ನು ಒಂದೇ ದಿನಕ್ಕೆ ಗೃಹ ಇಲಾಖೆ ಬದಲಿಸಿದೆ!
‘ಶಾಲೆಗಳ ವ್ಯಾಪ್ತಿಯ ಅಗ್ನಿಶಾಮಕ ಠಾಣಾಧಿಕಾರಿಗಳ ಬದಲು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳೇ ಖುದ್ದು ಲೋ–ರೈಸ್ ಶಾಲಾ ಕಟ್ಟಡಗಳನ್ನು ಪರಿಶೀಲಿಸಿ ಪ್ರಮಾಣಪತ್ರ ನೀಡಬೇಕು’ ಎಂದು ಆದೇಶವನ್ನು ತಿದ್ದುಪಡಿ ಮಾಡಲಾಗಿದೆ. ಮೊದಲ ಆದೇಶ ಜೂನ್ 17 ರಂದು ಹೊರಡಿಸಿದ್ದರೆ, ಎರಡನೇ ತಿದ್ದುಪಡಿ ಆದೇಶವನ್ನು ಮರುದಿನ ಹೊರಡಿಸಲಾಗಿದೆ.
ವಿಳಂಬ ತಪ್ಪಿಸಲು ಸ್ಥಳೀಯ ಅಗ್ನಿಶಾಮಕ ಠಾಣಾಧಿಕಾರಿಗಳ ಮೂಲಕ ಅಗ್ನಿ ಆಕಸ್ಮಿಕಗಳ ಸುರಕ್ಷತೆ ಪ್ರಮಾಣಪತ್ರ ವಿತರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಇತ್ತೀಚೆಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತ್ತು.
‘ಸ್ಥಳೀಯ ಅಗ್ನಿಶಾಮಕ ಠಾಣಾಧಿಕಾರಿಗಳ ಬದಲು ಜಿಲ್ಲಾ ಅಗ್ನಿಶಾಮಕಅಧಿಕಾರಿಗಳು ಖುದ್ದು ಭೇಟಿ ನೀಡಿ
ಅಗ್ನಿ ಅವಘಡ ಸುರಕ್ಷತೆ ಪ್ರಮಾಣಪತ್ರ ನೀಡಬೇಕೆಂಬ ಆದೇಶದಿಂದ ಖಾಸಗಿ ಶಾಲೆಗಳಿಗೆ ಅದರಲ್ಲೂ ಗ್ರಾಮೀಣಭಾಗದ ಬಜೆಟ್ ಶಾಲೆಗಳಿಗೆ ಆಘಾತವಾಗಿದೆ. ಹೀಗಾಗಿ, ತಿದ್ದುಪಡಿ ಮಾಡಿದ
ಆದೇಶವನ್ನು ಹಿಂಪಡೆದು, ಪ್ರಮಾಣಪತ್ರನೀಡುವ ಅಧಿಕಾರವನ್ನು ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ನೀಡಬೇಕು’ಎಂದು ರುಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆಆಗ್ರಹಿಸಿದ್ದಾರೆ.
‘ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಮೂಲಕವೇ ಶಾಲೆಗಳಿಗೆ ಅಗ್ನಿ ಅವಘಡ ಸುರಕ್ಷತೆ ಪ್ರಮಾಣಪತ್ರ ಪಡೆಯಬೇಕೆಂಬ ನಿಯಮ ಕಳೆದ ವರ್ಷವೇ ಇತ್ತು. ಅಧಿಕಾರಿಗಳ ಕಿರುಕುಳ, ಲಂಚಗುಳಿತನಕ್ಕೆ ಬೇಸತ್ತು ಸಾಕ್ಷ್ಯ ಸಮೇತ ದೂರು ನೀಡಿದ್ದೆವು. ಬಳಿಕ ಡಿಎಫ್‌ಒಗೆ ಇದ್ದ ಅಧಿಕಾರವನ್ನು ವಲಯ ಅಗ್ನಿಶಾಮಕ ಅಧಿಕಾರಿಗಳಿಗೆ (ಆರ್‌ಎಫ್‌ಒ) ವರ್ಗಾಯಿಸಲಾಗಿತ್ತು. ಇದು ಇನ್ನೂ ಕಷ್ಟಕರ ಆಗಿದ್ದರಿಂದ ಹೋರಾಟ ಮುಂದುವರಿಸಿದ್ದೆವು. ಹೀಗಾಗಿ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹೊಣೆ ನೀಡಿ ಆದೇಶನೀಡಲಾಗಿತ್ತು. ಆದರೆ, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಲಾಬಿಗೆ ಮಣಿದು ಒಂದೇ ದಿನದಲ್ಲಿ ಆದೇಶವನ್ನು ತಿದ್ದುಪಡಿಮಾಡಲಾಗಿದೆ’ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.