ಬೆಂಗಳೂರು: ಏರೋ ಇಂಡಿಯಾ ಸಮೀಪ ವಾಹನಗಳ ಪಾರ್ಕಿಂಗ್ ಆವರಣದಲ್ಲಿ ಅಗ್ನಿ ಅವಘಡ ಸಂಭವಿಸಿ ಕಾರುಗಳು ಭಸ್ಮವಾಗಲು ವಾಹನವೊಂದರ ಸೈಲೆನ್ಸರ್ ಅಧಿಕ ಬಿಸಿಯಾಗಿ ಬೆಂಕಿ ಕಿಡಿಗಳನ್ನು ಚಿಮ್ಮಿದ್ದೇ ಕಾರಣವಾಗಿರಬಹುದು ಎಂದು ಅಧಿಕಾರಿಗಳು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮಾಹಿತಿ ನೀಡಿದರು.
ನಿರ್ಮಲಾ ಅವರು ಭಾನುವಾರ ಬೆಳಿಗ್ಗೆ ಬೆಂಕಿ ಆಕಸ್ಮಿಕ ನಡೆದ ಸ್ಥಳಕ್ಕೆ ವಾಯುಪಡೆ, ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳ ಜತೆ ಭೇಟಿ ನೀಡಿ ಮಾಹಿತಿ ಪಡೆದರು. ಈ ಬೆಂಕಿ ಅವಘಡದಲ್ಲಿ 300 ಕಾರುಗಳು ಸುಟ್ಟು ಹೋಗಿದ್ದವು.
ಇದನ್ನೂ ಓದಿ...‘ಖುಷಿಯಲ್ಲಿ ಮೈಮರೆತಾಗ ಕರಕಲಾದವು ಕನಸಿನ ಕಾರುಗಳು’
ಪಿ–4 ಪಾರ್ಕಿಂಗ್ ಪ್ರದೇಶದಲ್ಲಿ ಗಂಟೆಗೆ 30 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಇದರಿಂದ ಅತಿ ಬೇಗನೆ ಬೆಂಕಿ ವ್ಯಾಪಿಸಿಕೊಂಡಿತು. ಬೆಂಕಿಯನ್ನು ನಿಯಂತ್ರಣಕ್ಕೆ ತರಲು 13 ಅಗ್ನಿ ಶಾಮಕ ವಾಹನಗಳು, 33 ಅಗ್ನಿ ಮಿತ್ರ ವಾಹನಗಳು, ಭಾರತೀಯ ವಾಯುಪಡೆಯ ಆರು ಸಿಎಫ್‌ಟಿ ವಾಹನಗಳನ್ನು ಬಳಸಿಕೊಳ್ಳಲಾಯಿತು. ಬೆಂಕಿಯನ್ನು ನಂದಿಸಲು 3000 ಲೀಟರ್ ಫೋಂ ಬಳಸಲಾಯಿತು. 45 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಲಾಯಿತು ಎಂದು ಅಧಿಕಾರಿಗಳು ವಿವರಣೆ ನೀಡಿದರು.
ಸಕಾಲದಲ್ಲಿ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಿದ್ದರಿಂದ ಹೆಚ್ಚು ಹಾನಿ ಸಂಭವಿಸಲಿಲ್ಲ. ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ ಬೆಂಕಿಯನ್ನು ನಂದಿಸಲು ಸೂಕ್ತ ಮಾರ್ಗದರ್ಶನ ನೀಡಿತು. ಪಾರ್ಕಿಂಗ್ ಪ್ರದೇಶದಲ್ಲಿ ಸುಮಾರು 3000 ಕ್ಕೂ ಹೆಚ್ಚು ವಾಹನಗಳಿದ್ದವು. ಬೆಂಕಿ ಬಿದ್ದ ಮಾಹಿತಿ ಸಿಗುತ್ತಿದ್ದಂತೆ ಸಾಕಷ್ಟು ವಾಹನಗಳ ಗಾಜು ಒಡೆದು, ಪಾರ್ಕಿಂಗ್ ಬ್ರೇಕ್ ತೆರವು ಮಾಡಿ ದೂರಕ್ಕೆ ಒಯ್ಯಲಾಯಿತು. ಇದರಿಂದ ಬೆಂಕಿ ಹೆಚ್ಚು ಕಾರುಗಳಿಗೆ ವ್ಯಾಪಿಸುವುದನ್ನು ತಡೆಯಲು ಸಾಧ್ಯವಾಯಿತು. ಒಟ್ಟು 278 ಕಾರುಗಳು ಸಂಪೂರ್ಣ ಸುಟ್ಟು ಹೋಗಿವೆ ಮತ್ತು 73 ಕಾರುಗಳು ಭಾಗಶಃ ಹಾನಿಯಾಗಿವೆ (16 ಬೆಂಕಿಯಿಂದ, 57 ಗಾಜು ಒಡೆದು ದೂರ ಸರಿಸಿದ್ದರಿಂದ) ಎಂದರು.
ಸುಟ್ಟು ಹೋದ ಮತ್ತು ಹಾನಿಗೊಳಗಾದ ಕಾರುಗಳ ಮಾಲಿಕರಿಗೆ ತ್ವರಿತಗತಿಯಲ್ಲಿ ವಿಮೆ ಕ್ಲೇಮು ಸ್ವೀಕರಿಸಲು ಆರ್‌ಟಿಒ ಹೆಲ್ಪ್ ಡೆಸ್ಕ್ ಆರಂಭಿಸಬೇಕು. ಅಲ್ಲಿ ವಿಮಾ ಕಂಪನಿಗಳ ಪ್ರತಿನಿಧಿಗಳೂ ಹಾಜರಿರಬೇಕು ಎಂದು ಸಚಿವೆ ನಿರ್ಮಲಾ ಅಧಿಕಾರಿಗಳಿಗೆ ಸೂಚಿಸಿದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.