ADVERTISEMENT

ಪಟಾಕಿ ಪರಿಸರಕ್ಕೆ ಮಾರಕ; ಹೈಕೋರ್ಟ್‌ ತೀರ್ಪಿನಲ್ಲಿ ಫೋಟೊ: ದೇಶದಲ್ಲೇ ಮೊದಲು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 21:05 IST
Last Updated 4 ಆಗಸ್ಟ್ 2022, 21:05 IST
   

ಬೆಂಗಳೂರು: ಪಟಾಕಿಗಳನ್ನು ಬೆಂಗಳೂರು ನಗರ ಪ್ರದೇಶದ ಹೊರವಲಯದಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ ಹೊರಡಿಸಿದ್ದ ಪೊಲೀಸ್ ಇಲಾಖೆಯ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್‌, ‘ನಗರ ಪ್ರದೇಶಗಳ ಒಳಗೆ ಪಟಾಕಿ ಮಾರಾಟ ನಡೆಸುವುದು ಜೀವಸಂಕುಲಕ್ಕೆ ಅತ್ಯಂತ ಅಪಾಯ
ಕಾರಿಯಾದುದು’ ಎಂದು ಅಭಿಪ್ರಾಯಪಟ್ಟಿದೆ.

ಬೆಂಗಳೂರು ಮಹಾನಗರದ ಮಾರುಕಟ್ಟೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಮಾರಾಟ ಮಾಡುವುದಕ್ಕೆ ನೀಡಲಾಗಿದ್ದ ನಿರಾಕ್ಷೇಪಣ ಪತ್ರವನ್ನು ಹಿಂಪಡೆದ ಪೊಲೀಸ್‌ ಇಲಾಖೆಯ ಆದೇಶ ಪ್ರಶ್ನಿಸಿ ಮೆಸರ್ಸ್‌ ಮಧಿ ಟ್ರೇಡಿಂಗ್‌ ಕಂಪನಿ ಸೇರಿದಂತೆ ಒಟ್ಟು 10 ವ್ಯಾಪಾರಸ್ಥರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

‘ಪಟಾಕಿ ಮಾರಾಟ ಮಾಡುವುದು ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕು ಎನಿಸುವುದಿಲ್ಲ. ಯಾಕೆಂದರೆ ಈ ವಿಧಿಯಡಿ, ವಿಷ, ಲಿಕ್ಕರ್‌, ತಂಬಾಕು, ಸ್ಫೋಟಕ ವಸ್ತುಗಳ ಮಾರಾಟ ಹೇಗೆ ಮೂಲಭೂತ ಹಕ್ಕು ಎನ್ನಿಸಿಕೊಳ್ಳುವುದಿಲ್ಲವೋ ಅದೇ ರೀತಿ ಪಟಾಕಿ ಮಾರಾಟವೂ ಕೂಡಾ ಮೂಲಭೂತ ಹಕ್ಕಿನ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಹಲವು ಮಹತ್ವದ ತೀರ್ಪುಗಳನ್ನು ಉಲ್ಲೇಖಿಸಿದೆ.

ADVERTISEMENT

‘ಕೋರ್ಟ್‌, ಸರ್ಕಾರ ರೂಪಿಸುವ ಶಾಸನಗಳ ಪ್ರಕ್ರಿಯೆಯನ್ನು ಪರಾಂಬರಿಸಿ ತೀರ್ಪು ನೀಡಬಹುದೇ ಹೊರತು ಇಂತಹುದನ್ನು ಮಾಡಬೇಕು ಅಥವಾ ಮಾಡಬಾರದು ಎಂದು ಹೇಳುತ್ತಾ ಸರ್ಕಾರವನ್ನು ನಡೆಸಲು ಆಗುವುದಿಲ್ಲ. ಹಾಗಾಗಿ, ಇಂತಹ ಪ್ರಕರಣಗಳಲ್ಲಿ ಕೋರ್ಟ್, ಮೂಗು ತೂರಿಸಲು ಸಾಧ್ಯವಿಲ್ಲ. ಆದಾಗ್ಯೂ, ಪಟಾಕಿ ವ್ಯಾಪಾರಸ್ಥರಿಗೆ ನಗರ ಪ್ರದೇಶದಲ್ಲಿ ವ್ಯಾಪಾರ ನಡೆಸಲು ನೀಡಿದ್ದ ನಿರಾಕ್ಷೇಪಣ ಪತ್ರ ಹಿಂಪಡೆದಿರುವ ಪೊಲೀಸ್ ಇಲಾಖೆಯ ಕ್ರಮ ಸಮಂಜಸವಾಗಿಯೇ ಇದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಬೆಂಗಳೂರಿನಂತಹ ಜನನಿಬಿಡ ಪ್ರದೇಶಗಳು ಈಗಾಗಲೇ ಶಬ್ದಹಾಗೂ ವಾಯು ಮಾಲಿನ್ಯದಿಂದ ತತ್ತರಿಸುತ್ತಿವೆ. ಇಂತಹುದರಲ್ಲಿ ಪಟಾಕಿ ಸುಡುವುದಕ್ಕೆ ಅವಕಾಶ ಮಾಡಿಕೊಟ್ಟರೆ ಈಗಿರುವ ಸಂಕಟ ಮತ್ತಷ್ಟು ಹೆಚ್ಚುತ್ತದೆ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

‘ಪಟಾಕಿಗಳು ವ್ಯಾಪಾರ ವಹಿವಾಟು ನಡೆಸಲು ಅತೀತವಾದ ಸರಕುಗಳ (ರೆಸ್‌ ಎಕ್ಸ್ಟ್ರಾ ಕಮರ್ಶಿಯಮ್‌) ವ್ಯಾಪ್ತಿಗೆ ಒಳಪಡುತ್ತವೆ. ಅಂತೆಯೇ, ಹಸಿರು ಪಟಾಕಿಗಳೂ ಸ್ಫೋಟಕವೇ ಆದ್ದರಿಂದ ಅವೂ ಪರಿಸರಕ್ಕೆ ಮಾರಕ. ಹಾಗಾಗಿ, ಪಟಾಕಿಗಳ ಉತ್ಪಾದನೆ, ಸಾಗಾಟ ಮೂಲಭೂತ ಹಕ್ಕಿನ ಮಿತಿಯಲ್ಲಿ ಪ್ರಶ್ನಾರ್ಹ ಎನಿಸುವುದಿಲ್ಲ ಹಾಗೂ ಪಟಾಕಿಗಳನ್ನು ಸುಡುವುದರಿಂದ ಪ್ರಕೃತಿ ಮಾತೆಗೆ ಅಪಾಯವಿದೆ ಎಂದು ಹೇಳುವುದಕ್ಕೆ ಯಾವುದೇ ಹೆಚ್ಚಿನ ಸಂಶೋಧನೆ ಬೇಕಿಲ್ಲ’ ಎಂದು ನ್ಯಾಯಪೀಠ ವಿವರಿಸಿದೆ.

ತೀರ್ಪಿನಲ್ಲಿ ಫೋಟೊ: ದೇಶದಲ್ಲೇ ಮೊದಲು

ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದವರ ಎರಡು ಕ್ಲಿನಿಕಲ್‌ ಛಾಯಾಚಿತ್ರಗಳನ್ನು ತೀರ್ಪಿನ ಒಂಬತ್ತನೇ ಪುಟದಲ್ಲಿ ಮುದ್ರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಹೈಕೋರ್ಟ್‌ ತೀರ್ಪುಗಳ ಸಂಪ್ರದಾಯವನ್ನು ಮುರಿದಿದ್ದು, ದೇಶದ ಹೈಕೋರ್ಟ್‌ ತೀರ್ಪುಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆಸಿದ ಮೊದಲ ನ್ಯಾಯಮೂರ್ತಿ ಎನಿ‌ಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.